ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಟರ್‌ಗ್ರಿಡ್ ಚರ್ಚೆ: ಸರ್ಕಾರಿ ಆದೇಶ ಶೀಘ್ರ

Vishwanath S
Updated On : 24 May 2013, 10:53 am

ತುಮಕೂರು: ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ರೊಂದಿಗೆ ಚರ್ಚಿಸಿದ್ದು, ಶೀಘ್ರವಾಗಿ ಸರ್ಕಾರಿ ಆದೇಶ ಹೊರಡಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ಬಸವರಾಜು ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಹಿನ್ನೆಲೆಯಲ್ಲಿ ಯೋಜನೆಗಳು ನೆನೆಗುದಿಗೆ ಬೀಳಬಾರದು. ಹಿಂದಿನ ಸರ್ಕಾರ ಅತ್ಯುತ್ತಮವಾದ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಸಹ ವಿಧಾನಸಭಾ ಅಧಿವೇಶನದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು.
ಈಗ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಈಗ ಅವರ ಗಮನಕ್ಕೆ ಮತ್ತೆ ತರಲಾಗಿದೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ರೈತರಿಗೆ ನೀರೊದಗಿಸುವ ಮಹತ್ವಾಕಾಂಕ್ಷೆ ಯೋಜನೆಯನ್ನು ಆದ್ಯತೆ ಮೇಲೆ ಕೈಗೊಳ್ಳಲೇಬೇಕಿದೆ ಎಂದು ತಿಳಿಸಿದ್ದಾರೆ ಎಂದು ಬಸವರಾಜು ತಿಳಿಸಿದರು.
ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ನಿರ್ಮಿಸಿ ಮಧ್ಯ ಕರ್ನಾಟಕದ 9 ಜಿಲ್ಲೆಗಳ 43 ತಾಲೂಕುಗಳ ಸುಮಾರು 10 ಸಾವಿರ ಕೆರೆಗಳಿಗೆ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಿಕೊಡಲು ಜಿ.ಎಸ್. ಪರಮಶಿವಯ್ಯನವರ ವರದಿ, ಎತ್ತಿನ ಹೊಳೆ ಯೋಜನೆ ಹಾಗೂ ಹೇಮಾವತಿ ಪ್ಲಡ್ ಪ್ಲೋ ಕೆನಾಲ್‌ನಿಂದ ಸುಮಾರು 12 ಟಿಎಂಸಿ ನೀರಿನ ಯೋಜನೆಗೆ ಕಳೆದ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿತ್ತು. ಆದರೆ ಜಲಸಂಪನ್ಮೂಲ ಇಲಾಖೆ ಇನ್ನೂ ಸರ್ಕಾರಿ ಆದೇಶ ಮಾಡದೇ ಇರುವುದು ವಿಷಾದನೀಯ ಎಂದಿರುವ ಸಂಸದರು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಯೋಜನೆ ಜಾರಿಗೆ ಭರವಸೆ ಪಡೆದಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement