ವೇದಾಂತ ತತ್ವ ಪುನರುತ್ಥಾನ ಮಾಡಿದವರೇ ಶಂಕರಾಚಾರ್ಯ
ಕ ಪ್ರ ವಾರ್ತೆ ಮಧುಗಿರಿ ಮೇ 24
ಹಿಂದೂ ಧರ್ಮ ಜೈನ ಮತ್ತು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿ ಅಪಹಾಸ್ಯಕ್ಕೀಡಾಗಿದ್ದಾಗ ಸಂಕಷ್ಟ ಕಾಲದಲ್ಲಿ ಅವತರಿಸಿ ಹಿಂದೂ ವೇದಾಂತ ತತ್ವಗಳ ಪುನರುತ್ಥಾನ ಮಾಡಿದವರೇ ಶ್ರೀಶಂಕರಚಾರ್ಯರು ಎಂದು ಕೆ.ನಾಗರಾಜಶಾಸ್ತ್ರಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀಶಂಕರ ಜಯಂತಿ ಆರಾಧನೆ ಪ್ರಯುಕ್ತ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ 6 ದಿನಗಳ ಕಾಲ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನ ಮಾರ್ಗ ವಿಶ್ಲೇಷಿಸುವ ಅದ್ವೈತ ಮಾರ್ಗ ತಿಳಿಸಿರುವ ಶ್ರೀಶಂಕರರು ಸಾಮಾನ್ಯ ಜನರ ಜೀವನ ಸಾರ್ಥಕತೆಗೆ ಮುಕ್ತಿ ಸಾಧನೆಗೆ ಅನುಕೂಲವಾಗುವಂತೆ ದೇವರ ಪೂಜೆ ಸ್ತುತಿಗಳು, ಸ್ತೋತ್ರ ರಚಿಸಿ ಕೊಟ್ಟಿದ್ದಾರೆ. ಉಪನಿಷತ್ತುಗಳಿಗೆ ಅರ್ಥಪೂರ್ಣವಾದ ಶ್ರವಣ, ಸ್ಮರಣ ಸಂಕೀರ್ತನ ಪಾದ ಸೇವನ, ಅರ್ಚನ ದಾಸವಂದನ, ಸಕ್ಯ ಆತ್ಮ ನಿವೇದನೆಗಳಿಗೆ ಅನುಕೂಲವಾಗುವ ಅರ್ಥಗರ್ಭಿತವಾದ ಸ್ತೋತ್ರ ರಚಿಸಿ ಸನಾತನ ವೇದ ಧರ್ಮಕ್ಕೆ ಅರ್ಥ ತಿಳಿಸಿ ಮನುಷ್ಯನ ಮುಕ್ತಿಗೆ ದಾರಿ ತೋರಿಸಿದವರು ಎಂದರು.
ಸಾಮೂಹಿಕ ಉಪನಯನ ಮಾಡುವವರಿಗೆ ವೇ.ಬ್ರ.ಶ್ರೀ ನಾಗರಾಜಶಾಸ್ತ್ರಿ , ವಿನಯಶರ್ಮ, ಕೆ.ಗುರುಪ್ರಸಾದ್, ಮೃತ್ಯುಂಜಯ ಶರ್ಮ, ಮೊದಲಾದ ಋತ್ವಿಕರುಗಳಿಂದ ಪುಣ್ಯಾಹ, ನಾಂದಿ, ನವಗ್ರಹ ಪೂಜೆ, ಹೋಮ, ಬಳಿಕ ಶ್ರೀಶಾರದ ಮಹಿಳಾ ಮಂಡಳಿಯವರಿಂದ ಹೂವೀಳ್ಯ ಕಾರ್ಯಕ್ರಮ ನೆರವೇರಿಸಿದರು.
ಶೇಷಾದ್ರಿ ಅವರಿಂದ ಅದ್ವೈತ ಮತ್ತು ಉಪನಯನ, ಸಂದ್ಯಾವಂದನೆ ಸಂಸ್ಕಾರಗಳ ಬಗ್ಗೆ ಪ್ರವಚನ ಮಾಡಿದರು.
ಶ್ರೀ ಶಂಕರ ಮಠದಲ್ಲಿ ಶ್ರೀಶಂಕರಚಾರ್ಯರಿಗೆ, ಶ್ರೀಶಾರದಮ್ಮ ಅವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ ಮಂಗಳಾರತಿ ಮಾಡಿದ ನಂತರ ಶ್ರೀಶಂಕರಚಾರ್ಯರ ಪ್ರತಿಮೆ ಮತ್ತು ಭಾವಚಿತ್ರವನ್ನು ಅಲಂಕೃತ ರಥದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ವೇದಘೋಷ ಮತ್ತ ಭಜನೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಹಾಮಂಗಳಾರತಿ ಬ್ರಾಹ್ಮಣ ಸಂತರ್ಪಣೆಯೊಂದಿಗೆ ಶ್ರೀಶಂಕರ ಜಯಂತಿ ಸಪ್ತಾಹ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ತಾ.ಅಧ್ಯಕ್ಷ ಪಿ.ಆರ್.ನಂಜುಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.