ಹಿಂದೆ ಕಾಂಗ್ರೆಸ್ ಟೀಕಿಸಿರಲಿಲ್ಲ, ಈಗಲೂ ಟೀಕಿಸಿಲ್ಲ
ತುಮಕೂರು: ಮೂಲ ಕಾಂಗ್ರೆಸ್ಸಿಗ, ಹಾಲಿ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಕಾಂಗ್ರೆಸ್ ಪಕ್ಷದ ಕುರಿತು ತಮ್ಮ ಅನಿಸಿಕೆಗಳನ್ನು ಹೊರಗೆಡವಿದ್ದಾರೆ.
ತುಮಕೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಈ ಹಿಂದೆ ಕಾಂಗ್ರೆಸ್ ಬಿಟ್ಟಾಗಲೂ ಕಾಂಗ್ರೆಸ್ ಪಕ್ಷವನ್ನಾಗಲೀ, ಹೈಕಮಾಂಡನ್ನಾಗಲೀ ಟೀಕಿಸಿರಲಿಲ್ಲ. ನಂತರವೂ ಟೀಕಿಸಿಲ್ಲ. ಪ್ರಸ್ತುತ ಈಗಲೂ ಟೀಕಿಸಿಲ್ಲ. ಆದರೆ ಈಗಲೂ ಕಾಂಗ್ರೆಸ್ಸಿಗರೊಂದಿಗೆ ಸ್ನೇಹವಿದೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಮೇಲಿನಂತೆ ಉತ್ತರಿಸಿದ ಅವರು, ಸದ್ಯ ಬಿಜೆಪಿಯಲ್ಲಿದ್ದೇನೆ. ಪಕ್ಷ ತೊರೆಯುವುದಿಲ್ಲ. ಯಾವುದೇ ಪಕ್ಷ ಸೇರುವ ಇರಾದೆ ತಮಗೆ ಸದ್ಯಕ್ಕಿಲ್ಲ. ಇನ್ನು ತಮ್ಮ ಸಂಸದಗಿರಿಗೆ 10 ತಿಂಗಳ ಕಾಲಾವಕಾಶವಿದೆ. ನಂತರ ಯೋಚಿಸೋಣ ಎಂದರು.
ಪ್ರಧಾನಿ ಸಿಂಗ್ ಸಿಕ್ಕಿದ್ದರು: ಇತ್ತೀಚೆಗೆ ಪ್ರಧಾನಿ ಮನಮೋಹನ್ಸಿಂಗ್ ದೆಹಲಿಯಲ್ಲಿ ಸಿಕ್ಕಿದ್ದರು. ಹಲೋ, ಹೌ ಆರ್ಯು ಎಂದರು. ಪಕ್ಷ ಬಿಟ್ಟರೂ ಪ್ರಧಾನಿ ಸಿಂಗ್ ತಮ್ಮನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ಸಿಂಗ್ ಒಂದೇ ಒಂದು ದಿನ ಮುಂಚೆ ಲೋಕಸಭಾ ಚುನಾವಣೆ ನಡೆಸುವ ವ್ಯಕ್ತಿಯಲ್ಲ. ಲೆಕ್ಕಾಚಾರದ ಮನುಷ್ಯ ಎಂದು ಸಿಂಗ್ರನ್ನು ಪ್ರಶಂಸಿದರು.
ಸೇವೆ ಮಾಡಲು ಪಕ್ಷ ಯಾವುದಾದರೇನು: ತಾವು ಕಾಂಗ್ರೆಸ್ ಸೇರುತ್ತೀರಾ, ಬಿಜೆಪಿ ಬಿಡುತ್ತೀರಾ ಎಂಬು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಬಸವರಾಜು, ಸೇವೆ ಮಾಡಲು ಪಕ್ಷ ಯಾವುದಾದರೇನು ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.
ಬಿಎಸ್ವೈ ಕಾಂಗ್ರೆಸ್ ಸೇರೋದು ಗೊತ್ತಿಲ್ಲ: ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್ ಸೇರೋದು ತಮಗೆ ಗೊತ್ತಿಲ್ಲ. ಯಡಿಯೂರಪ್ಪನವರ ನಡೆ ಕುರಿತು ತಮಗೆ ಮಾಹಿತಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.