ಅಗ್ಗದ ದರದಲ್ಲಿ ಮದ್ಯ: ಶ್ರೀಗಳ ವಿರೋಧ
ಬೆಳಗಾವಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅಗ್ಗದ ದರದಲ್ಲಿ ಮದ್ಯ ವಿತರಿಸಲು ಮುಂದಾಗಿರುವುದಕ್ಕೆ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ನಿಲ್ಲಿಸಲು ಅಗ್ಗದ ದರದಲ್ಲಿ ಮದ್ಯ ವಿತರಿಸಲಾಗುವುದು ಎಂದು ಹೇಳಿಕೊಂಡಿದೆ. ಆದರೆ, ವಾಸ್ತವದಲ್ಲಿ ಬೊಕ್ಕಸ ತುಂಬಿಸಿಕೊಳ್ಳುವ ಉದ್ದೇಶದಿಂದ ಅಗ್ಗದ ದರದಲ್ಲಿ ಮದ್ಯ ವಿತರಿಸಲು ಸರ್ಕಾರ ಮುಂದಾಗಿದೆ ಎಂದರು.
ಅಬಕಾರಿ ಇಲಾಖೆಗೆ 10 ಸಾವಿರ ಕೋಟಿ ಆದಾಯವನ್ನು 12 ಸಾವಿರ ಕೋಟಿಯವರೆಗೆ ಹೆಚ್ಚಿಸಬೇಕೆಂದು ಸರ್ಕಾರ ಈಗಾಗಲೇ ಆದೇಶಿಸಿದೆ. ಸರ್ಕಾರ ಮೊದಲು ಅಗ್ಗದ ದರದಲ್ಲಿ ಮದ್ಯ ಪೂರೈಸುವ ಯೋಜನೆಯನ್ನು ಕೈಬಿಟ್ಟು, ಗುಜರಾತ್ ರಾಜ್ಯದಂತೆ ಕರ್ನಾಟಕದಲ್ಲೂ ಮದ್ಯಪಾನವನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಸರ್ಕಾರವೇ ಕಡಿಮೆ ದರದಲ್ಲಿ ಮದ್ಯ ನೀಡಿದರೇ, ಸಮಾಜದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುವುದು. ಕುಟುಂಬಗಳಲ್ಲಿ ಕೊಲಾಹಲ ಸೃಷ್ಟಿಯಾಗುತ್ತದೆ. ಆರೋಗ್ಯವಂತ ಸಮಾಜಕ್ಕಾಗಿ ಮದ್ಯ ಪಾನವನ್ನು ನಿಷೇಧಿಸಬೇಕು ಹೊರತು ಕಡಿಮೆ ದರದಲ್ಲಿ ಮದ್ಯ ನೀಡುವುದಲ್ಲ ಎಂದು ಕಿಡಿಕಾರಿದರು.