ಪರಮೇಶ್ವರ್ಗಾಗಿ ಮಧುಗಿರಿ ಬಿಟ್ಟುಕೊಡಲು ಸಿದ್ಧ
ಕ.ಪ್ರ.ವಾರ್ತೆ ತುಮಕೂರು ಮೇ 25
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗಾಗಿ ಮಧುಗಿರಿ ಕ್ಷೇತ್ರ ಬಿಟ್ಟುಕೊಡಲು ಸಿದ್ದ ಎಂದು ಮಧುಗಿರಿ ಕಾಂಗ್ರೆಸ್ ಶಾಸಕ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಘೋಷಿಸಿದ್ದಾರೆ. ನಗರದಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ರಾಜ್ಯ ಕಾಂಗ್ರೆಸ್ನ ಪ್ರಭಾವಿ ನಾಯಕರು. ಮಧುಗಿರಿ ಅವರ ಹಳೆಯ ಕ್ಷೇತ್ರ. ಅವರ ಮಾರ್ಗದರ್ಶನ, ಆಶೀರ್ವಾದದಿಂದಲೇ ಈಗ ನಾನು ಗೆದ್ದು ಬಂದಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ, ಸಮರ್ಥ ನಾಯಕತ್ವ ಬೇಕು. ಪರಮೇಶ್ವರ್ ಅವರಲ್ಲಿ ಈ ಗುಣಗಳಿವೆ. ತಮಗಿಂತ ಪರಮೇಶ್ವರ್ ಸಮರ್ಥರು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರಬಲ ನಾಯಕತ್ವ ಅತ್ಯಗತ್ಯ. ಹೀಗಾಗಿ ಪರಮೇಶ್ವರ್ ಇಚ್ಛಿಸಿದಲ್ಲಿ ತಾವು ತಮ್ಮ ಸ್ಥಾನ ತೆರಲು ಮಾಡಲು ಸಿದ್ದ. ಈ ಕುರಿತು ಪಕ್ಷದ ಕಾರ್ಯಕರ್ತರು, ಮುಖಂಡರು, ಜನಾಭಿಪ್ರಾಯ ಪಡೆದು ಮೇಲಿನ ಮಾತುಗಳನ್ನಾಡುತ್ತಿದ್ದೇನೆ ಎಂದು ರಾಜಣ್ಣ ಸ್ಪಷ್ಟಪಡಿಸಿದರು.
ಅಧ್ಯಕ್ಷರ ಸೋಲಿನಿಂದ ಆಘಾತ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಧನೆ ನಿರಾಶಾದಾಯಕ. ಜಿಲ್ಲೆಯಲ್ಲಿ ಕನಿಷ್ಠ 7ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಸೋಲು ಪಕ್ಷಕ್ಕೆ ಹಾಗೂ ತಮಗೆ ಭಾರೀ ಆಘಾತ ನೀಡಿತು. ಪಕ್ಷದ ರಾಜ್ಯಾಧ್ಯಕ್ಷರಾಗಿ ಸೋತಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಕಾಂಗ್ರೆಸ್ ಗೆದ್ದಾಗಲೆಲ್ಲಾ ಅಂದಿನ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿಯಾಗುತ್ತಿದ್ದರು. ಇದಕ್ಕೆ ನಿದರ್ಶನಗಳೂ ಇವೆ. ಈ ಅವಕಾಶವೂ ಪರಮೇಶ್ವರ್ ಅವರಿಗಿತ್ತು. ಆದರೆ, ಪರಮೇಶ್ವರ್ ಸೋತರು ಎಂದು ಅಲವತ್ತುಕೊಂಡರು.
ತಮ್ಮದೇನಿದ್ದರೂ ನೇರ ನುಡಿ: ಸಿದ್ದರಾಮಯ್ಯ ಸಿಎಂ ಆಗಬೇಕು. 2 ನೇ ದೇವರಾಜ ಅರಸ್ ರೀತಿ ಕಾರ್ಯನಿರ್ವಸಿಬೇಕು ಎಂದು ಬಹಿರಂಗವಾಗೇ ಹೇಳಿಕೊಂಡು ಬಂದ ವ್ಯಕ್ತಿ ನಾನು. ಹಿಂದೊಂದು, ಮುಂದೊಂದು, ಒಳಗೊಂದು, ಹೊರಗೊಂದು ಹೇಳಿಕೆ ನೀಡುವ ವ್ಯಕ್ತಿ ನಾನಲ್ಲ. ಸಿದ್ದರಾಮಯ್ಯ ವಿಷಯದಲ್ಲಿ ಮುಚ್ಚು ಮರೆ ಏನಿರಲಿಲ್ಲ. ತಮ್ಮದೇನಿದ್ದರೂ ನೇರ ನುಡಿ. ಹೇಳುವುದನ್ನು ನೇರವಾಗಿ, ಧೈರ್ಯದಿಂದಲೇ ಹೇಳುವ ವ್ಯಕ್ತಿ ನಾನು ಎಂದು ಕೆಎನ್ಆರ್ ಸ್ಪಷ್ಟಪಡಿಸಿದರು. ಸಂಪುಟ ಸೇರುವುದು ಶತಸಿದ್ದ: ಇಂದಲ್ಲಾ ನಾಳೆ ಸಚಿವ ಸಂಪುಟ ಸೇರುವುದು ಶತಸಿದ್ದ. ನಾನೊಬ್ಬ ಹಿರಿಯ ಕಾಂಗ್ರೆಸ್ಸಿಗ. ರಾಜ್ಯದಲ್ಲಿ ಎಸ್ಟಿ ಜನಾಂಗದಿಂದ 11 ಮಂದಿ ಶಾಸಕರು ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದಾರೆ.
ಜಾತಿ ಕೋಟಾದಲ್ಲೇ ನೀಡಿದರೂ 3 ಮಂದಿಗೆ ಮಂತ್ರಿಗಿರಿ ನೀಡಬೇಕು. ಅದೂ ಸಿಕ್ಕಿರುವುದು ಒಂದೇ ಸ್ಥಾನ. ರಾಜ್ಯದ ದಕ್ಷಿಣ ಭಾಗದಲ್ಲಿ ಎಸ್ಟಿ ಜನಾಂಗದಿಂದ ಗೆದ್ದಿರುವುದು. ಅದೂ ತಾವು ಮಾತ್ರ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಒಂದೂ ಮಂತ್ರಿಗಿರಿ ಸಿಕ್ಕಿಲ್ಲ. ಸಿಕ್ಕಿರುವುದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಶಿರಾಕ್ಕೆ ಎಂದು ರಾಜಣ್ಣ ವಿಶ್ಲೇಷಿಸಿದರು.
ಮಂತ್ರಿಗಿರಿ ಇಲ್ಲದಿದ್ದರೂ ಸೇವೆ: ಮಂತ್ರಿಗಿರಿ ಪಡೆಯಲು ಪ್ರಯತ್ನ ಪಡುವುದು ಸಹಜ. ಸಿಕ್ಕರೆ ಸಂತೋಷ. ಸಿಕ್ಕದಿದ್ದರೇ ಬೇಜಾರಿಲ್ಲ. ಸೇವೆ ಮಾಡಲು ಮಂತ್ರಿಗಿರಿಯೇ ಬೇಕೆಂದೇನೂ ಇಲ್ಲ. ಕ್ಷೇತ್ರದ ಅಭಿವೃದ್ಧಿ ತಮ್ಮ ಮೊದಲ ಆದ್ಯತೆ. ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿಕೊಂಡು ಹೋಗುವುದಾಗಿ ಕೆಎನ್ಆರ್ ಈ ಸಂದರ್ಭದಲ್ಲಿ ತಿಳಿಸಿದರು.