ಸೋನಿಯಾ ಸ್ಪರ್ಧಿಸಿದರೂ ಹೆದರಲ್ಲ: ಅಂಗಡಿ
ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಲೋಕಸಭೆ ಮತಕ್ಷೇತ್ರದಿಂದ ತಮ್ಮ ವಿರುದ್ಧ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇಲ್ಲವೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಬಂದು ಕಣಕ್ಕಿಳಿದರೂ ತಾವು ಹೆದರುವುದಿಲ್ಲ ಎಂದು ಬೆಳಗಾವಿ ಸಂಸದ ಬಿಜೆಪಿ ಮುಖಂಡ ಸುರೇಶ ಅಂಗಡಿ ಹೇಳಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಾವು ಬೆಳಗಾವಿ ಲೋಕಸಭೆ ಮತಕ್ಷೇತ್ರದಿಂದ ಮತ್ತು ಸತೀಶ ಜಾರಕಿಹೊಳಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿ, ರಮೇಶ ಜಾರಕಿಹೊಳಿ ತಮ್ಮ ರಾಜಕೀಯ ಬದ್ಧವೈರಿ ಎಂದು ಬಣ್ಣಿಸಿದರು.