ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಖಂಡನೆ
ಕ.ಪ್ರ. ವಾರ್ತೆ ಕುಣಿಗಲ್ ಮೇ 27
ಪುರಸಭೆಯ 13ನೇ ವಾರ್ಡ್ನಲ್ಲಿನ ಸ್ವತ್ತನ್ನು ಸಂರಕ್ಷಿಸುವಲ್ಲಿ ವಿಫಲರಾದ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಂದಾಯ ವಿಭಾಗದ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿದ ನಾಗರಿಕರು, ಸೋಮವಾರ ಪುರಸಭೆಗೆ ಮುತ್ತಿಗೆ ಹಾಕಿ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರಕ್ಕೆ ಕಳಿಸಿ, ಕಚೇರಿ ಹಾಗೂ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
13ನೇ ವಾರ್ಡ್ನ ತುಮಕೂರು ರಸ್ತೆಯಲ್ಲಿನ ಪುರಸಭೆಗೆ ಸೇರಿದ ತೆರೆದಬಾವಿ ಹಾಗೂ ನಿವೇಶನವನ್ನು ಖಾಸಗಿ ವ್ಯಕ್ತಿ ಕಬಳಿಸಲು ಮುಂದಾಗಿದ್ದು, ಇದನ್ನು ತಡೆದು ಪುರಸಭೆ ಸ್ವತ್ತನ್ನು ಸಂರಕ್ಷಿಸುವಂತೆ ಕ್ರಮ ಕೈಗೊಳ್ಳಲು ಕಳೆದ 15ದಿನಗಳಿಂದಲೂ ಸತತವಾಗಿ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಸಿಬ್ಬಂದಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದರ ಪರಿಣಾಮ ಬೇಸತ್ತ ನಾಗರಿಕರು, ಮುಖಂಡ ನಾಗರಾಜ್ ನೇತೃತ್ವದಲ್ಲಿ, ಸೋಮವಾರ ಪುರಸಭೆಗೆ ಮುತ್ತಿಗೆಹಾಕಿ, ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರಗೆ ಕಳುಹಿಸಿದರಲ್ಲದೆ, ಮುಖ್ಯದ್ವಾರಕ್ಕೆ ಬೀಗ ಜಡಿದು, ಪುರಸಭೆ ಸ್ವತ್ತನ್ನು ಸಂರಕ್ಷಿಸುವಲ್ಲಿ ವಿಫಲರಾದ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ, ನಿರೀಕ್ಷಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪುರಸಭೆ ಸ್ವತ್ತು: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ, ನಾಗರಾಜ್, ಕಳೆದ ಹಲವು ದಶಕಗಳಿಂದಲೂ ಸದರಿ ಪ್ರದೇಶ ಪುರಸಭೆ ಸ್ವತ್ತೆಂದು ದಾಖಲಾಗಿದೆ. 1964ರಲ್ಲಿ ಪುರಸಭೆ ಕುಡಿಯುವ ನೀರಿನ ಉದ್ದೇಶಕ್ಕೆ ಬಾವಿ ತೆಗೆಸಿ, ಪಂಪ್ಹೌಸ್ ಪ್ರಾರಂಭಿಸಿರುವುದು ದಾಖಲೆಗಳಿಲ್ಲದೆ, ಮುಖ್ಯರಸ್ತೆಗೆ ಹೊಂದಿಕೊಂಡಿರುವ ಪುರಸಭೆ ಸ್ವತ್ತು ಲಕ್ಷಾಂತರ ರು.ಬೆಲೆ ಬಾಳುತ್ತಿದ್ದು, ಖಾಸಗಿ ವ್ಯಕ್ತಿ ಕಬಳಿಸಲು ಮುಂದಾಗಿದ್ದಾರೆಂದು ದೂರು ನೀಡಿದರೂ, ಮುಖ್ಯಾಧಿಕಾರಿಯಾಗಲಿ, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕ, ಕಬಳಿಕೆದಾರರ ವಿರುದ್ಧ ಕ್ರಮ ಕೈಗೊಳ್ಳದೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವುದು ನೋಡಿದರೆ, ಪುರಸಭೆ ಸಿಬ್ಬಂದಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೂಡಲೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಂಡು ಪುರಸಭೆ ಜಾಗ ಸಂರಕ್ಷಿಸುವಂತೆ ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡದರು.
ಸ್ವತ್ತನ್ನು ರಕ್ಷಿಸಲು ಕ್ರಮ: ಈ ಮಧ್ಯೆ ಪುರಸಭೆಯ ಕಂದಾಯ ವಿಭಾಗದ ಅಧಿಕಾರಿಗಳಾದ ಮುರಳಿ ಹಾಗೂ ರಮೇಶ್, ಸದರಿ ಸ್ವತ್ತನ್ನು ಸಂರಕ್ಷಿಸಲು ಎಲ್ಲಾ ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದ್ದು, ಪುರಸಭೆಯ ಸ್ಪಷ್ಟ ಸೂಚನೆ ಇದ್ದರೂ, ಜಾಗದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಸಲು ಹೊರಟಿದ್ದ ವ್ಯಕ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಮುಂದಿನ ಕ್ರಮಕೈಗೊಂಡು ಪುರಸಭೆ ಸ್ವತ್ತಿನ ಸಂರಕ್ಷಣೆ ಮಾಡುವ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು. ಅಧಿಕಾರಿಗಳ ಭರವಸೆಗೆ ಸ್ಪಂದಿಸಿದ ಪ್ರತಿಭಟನಾಕಾರರು ಮೂರು ದಿನದೊಳಗೆ ಪುರಸಭೆ ವಶಕ್ಕೆ ಸ್ವತ್ತನ್ನು ಪಡೆಯುವಂತೆ ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು. ಪ್ರಮುಖರಾದ ಗುರುಪ್ರಸಾದ್, ಶ್ಯಾಮ್ಸುಂದರ್, ಗಿರೀಶ್, ಪಾರ್ಥಸಾರಥಿ, ಸುರೇಶ್ ಇತರರು ಪಾಲ್ಗೊಂಡಿದ್ದರು.