ಗುರುಕುಲ ಮಠದ ರಸ್ತೆ ಕೊಚ್ಚೆ ಕಟ್ಟೆಗೆ ಮುಕ್ತಿ ಯಾವಾಗ?
ಕ.ಪ್ರ. ವಾರ್ತೆ ತಿಪಟೂರು ಮೇ 27
ನಗರದ ಅತಿಹೆಚ್ಚು ಜನನಿಬಿಡ ಮತ್ತು ವಾಹನಗಳ ಓಡಾಟದ ರಸ್ತೆಗಳಲ್ಲಿ ಕೆ.ಆರ್. ಬಡಾವಣೆಯ ಶ್ರೀ ಗುರುಕುಲ ಮಠದ ಮುಂಭಾಗದ ರಸ್ತೆಯೂ ಒಂದು.
ಆದರೆ ಈ ರಸ್ತೆಗೆ ಒದಗಿರುವ ದುಃಸ್ಥಿತಿ ನಗರದ ಮತ್ತಿನ್ಯಾವ ರಸ್ತೆಗೂ ಬಂದಂತಿಲ್ಲ. ಬಿ.ಹೆಚ್. ರಸ್ತೆಯ ತ್ರಿಮೂರ್ತಿ ಟಾಕೀಸ್ ಮುಂಭಾಗದಿಂದ ಮಾಜಿ ಶಾಸಕ ದಿ.ವಿ.ಎಲ್.ಶಿವಪ್ಪನವರ ಮನೆ ಮುಂಭಾಗ ಸೇರಿದಂತೆ ಶಂಕರಪ್ಪ ಲೇ ಔಟ್ವರೆಗೂ ಗುಂಡಿಗೊಟರುಗಳಿಂದ ಕೂಡಿದ್ದು ಅಲ್ಲಲ್ಲಿ ಕೆಸರು ಗದ್ದೆಯಂತಾಗಿದೆ.
ನಗರದ ಪ್ರಸಿದ್ಧ ಶ್ರೀ ಗುರುಕುಲ ಮಠದ ಮತ್ತು ವಿದ್ಯಾರ್ಥಿನಿಲಯದ್ದೇಗೇಟ್ ಮುಂಭಾಗವೇ ಮಳೆ ನೀರಿನಿಂದ ನಿರ್ಮಾಣವಾಗಿರುವ ಕೊಚ್ಚೆ ಕಟ್ಟೆ ನಗರಸಭೆ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸುತ್ತದೆ. ಸ್ವಲ್ಪ ಮಳೆ ಬಂದರೂ ಸಾಕು. ಈ ರಸ್ತೆಯಲ್ಲಿ ಕೆಸರಿನ ಚಿಕ್ಕ ಕಟ್ಟೆಯೇ ನಿರ್ಮಾಣವಾಗಿ ಬಿಡುತ್ತದೆ. ವಾರಗಟ್ಟಲೆ ನಿಲ್ಲುವ ಈ ಕೊಚ್ಚೆ ಕಟ್ಟೆಯಿಂದ ಉತ್ಪತ್ತಿಯಾಗುವ ಸೊಳ್ಳೆ ಮತ್ತು ದುರ್ವಾಸನೆ ಇಡೀ ಕೆ.ಆರ್. ಬಡಾವಣೆಯನ್ನೇ ನಾಚಿಸುವಂತಿದೆ. ಈ ರಸ್ತೆ ಮುಂದಕ್ಕೆ 5ನೇ ಮುಖ್ಯ ರಸ್ತೆಯ ತಿರುವಿನಲ್ಲಿಯೂ ಕೆಸರುಗದ್ದೆಯಂತಾಗಿದೆ.
ಶ್ರೀಮಠಕ್ಕೆ ನಿತ್ಯವೂ ನೂರಾರು ಭಕ್ತರು ಮತ್ತು ಮಠದ ಎರಡೂ ಕಲ್ಯಾಣ ಮಂಟಪಗಳಲ್ಲಿ ನಿತ್ಯವೂ ನಡೆಯುವ ಮದುವೆ ಮತ್ತಿತರೆ ಸಮಾರಂಭಗಳಲ್ಲಿ ಭಾಗವಹಿಸಲು ಸಾವಿರಾರು ಸಾರ್ವಜನಿಕರು ಓಡಾಡುತ್ತಾರೆ. ಹೊರ ಊರುಗಳಿಂದಲೂ ನಿತ್ಯವೂ ನೂರಾರು ಮಂದಿ ಈ ರಸ್ತೆಯಲ್ಲಿ ಓಡಾಡುತ್ತಾರೆ. ಇಲ್ಲಿ ಓಡಾಡುವವರೆಲ್ಲರೂ ಈ ರಸ್ತೆಯ ದುಸ್ಥಿತಿ ಕಂಡು ತಿಪಟೂರು ನಗರಸಭೆ ಬದುಕಿದೆಯಾ ಎಂದು ಶಾಪ ಹಾಕಿಕೊಂಡೇ ಓಡಾಡುತ್ತಾರೆ.
ದೂರು ನೀಡಿದರೂ ಪ್ರಯೋಜನವಿಲ್ಲ: ಈ ಬಗ್ಗೆ ಹತ್ತು ಹಲವು ದೂರುಗಳನ್ನು ಸಾರ್ವಜನಿಕರು ನಗರಸಭೆಗೆ ನೀಡಿದ್ದರೂ, ಪೌರಾಯುಕ್ತರಾಗಲಿ ಅಥವಾ ಎಂಜಿನಿಯರಿಂಗ್ ವಿಭಾಗವಾಗಲಿ ಈ ಬಗ್ಗೆ ನಿರ್ಲಕ್ಷ್ಯ ತಾಳಿರುವುದರಿಂದ ತಿಪಟೂರು ನಗರದ ದುಃಸ್ಥಿತಿಯನ್ನು ರಾಜ್ಯದ ಇತರೆಡೆಗೂ ಹರಡಲು ಕಾರಣವಾಗಿರುವುದು ತೀರಾ ನಾಚಿಕೆಗೇಡಿನ ಸಂಗತಿ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಮಳೆ ಬಂದಾಗ ವಾರಗಟ್ಟಲೆ ನಿರ್ಮಾಣವಾಗುವ ಈ ಕೊಚ್ಚೆ ಕಟ್ಟೆಯನ್ನು ನಗರಸಭೆ ಈಗಲೂ ನಿರ್ಲಕ್ಷಿಸಿದಲ್ಲಿ ನಗರಸಭಾ ಕಚೇರಿ ಬಾಗಿಲಿನಲ್ಲಿ ಧರಣಿ ಮಾಡುವುದಾಗಿ ಕಲ್ಪತರು ಜನಪರ ಹೋರಾಟ ವೇದಿಕೆ ಸಹಕಾರ್ಯದರ್ಶಿ ಮೊಬೈಲ್ ಸತೀಶ್, ಕೆಜೆಪಿ ಯುವ ಮುಖಂಡ ಆಲದಹಳ್ಳಿ ಹರೀಶ್ ಎಚ್ಚರಿಕೆ ನೀಡಿದ್ದಾರೆ.