ಟೆಂಪೋ ಉರುಳಿ ಯುವತಿ ಸಾವು: 35 ಮಂದಿ ಗಾಯ
ಅಂಕೋಲಾ: ತಾಲೂಕಿನ ಮಂಜುಗುಣಿ ಸಮೀಪ ಗಂಗಾವಳಿ ನದಿಗೆ ಸೋಮವಾರ ಮದುವೆ ದಿಬ್ಬಣದ ಟೆಂಪೋ ಉರುಳಿ ಒಬ್ಬಳು ಮೃತಪಟ್ಟಿದ್ದು, 35 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ನಿಶಾ ಶ್ರೀಧರ ಖಾರ್ವಿ (15) ಮೃತಪಟ್ಟವಳು. ಅಂಕೋಲಾದ ಕಾರವಾರ ರಸ್ತೆಯಲ್ಲಿ ಮದುವೆ ದಿಬ್ಬಣದ ಟೆಂಪೋ ಚಲಾಯಿಸುತ್ತಿದ್ದ ಶಿವಾನಂದ ರಾಮು ನಾಯ್ಕ (52) ಹಾಗೂ ಮಂಜಗುಣಿಯ ಅಪೇಕ್ಷಾ ರಾಮಾ ಹರಿಕಂತ್ರ (15) ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಾನಂದನನ್ನು ಗೋವಾದ ಬಾಂಬೋಲಿ ಆಸ್ಪತ್ರೆಗೆ ಹಾಗೂ ಅಪೇಕ್ಷಾಳನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮದುವೆ ಮುಗಿಸಿ, ಮದುವೆಗೆ ಬಂದ ಸಂಬಂಧಿಕರು ಹಾಗೂ ಆಪ್ತೇಷ್ಟರನ್ನು ಟೆಂಪೋ ಮೂಲಕ ವಾಪಸ್ ಬರುತ್ತಿದ್ದರು. ಆಗ ಟೆಂಪೋ ಬ್ರೇಕ್ ಫೇಲಾಗಿ, ಮೊದಲು ಅಂಗಡಿ ಮುಂಗಟ್ಟಿಗೆ ಗುದ್ದಿದೆ. ಆಮೇಲೆ ಗಂಗಾವಳಿ ನದಿಗೆ ಉರುಳಿದೆ. ಸ್ಥಳದಲ್ಲಿದ್ದವರು ತಕ್ಷಣ ಟೆಂಪೋವನ್ನು ನೀರಿನಿಂದ ಮೇಲೆತ್ತಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಮಂಜಗುಣಿಯ ಗಣಪತಿ ಸಣ್ಣತಮ್ಮಾ ನಾಯ್ಕ ಅವರ ಅಂಗಡಿ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಂಗಡಿಯ ಮುಂದೆ ಬಸ್ಗಾಗಿ ಕಾದು ಕುಳಿತಿದ್ದ ಸಗಡಗೇರಿ ಗ್ರಾಮದ ದೇವಿ ಬೊಮ್ಮಯ್ಯ ಆಗೇರ ಎಂಬುವರಿಗೂ ಟೆಂಪೋ ಬಡಿದು ಗಾಯವಾಗಿದೆ. ಇತರೆ ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆ, ಕೆಎಲ್ಇ ಹಾಗೂ ಆರ್ಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಪಿಐ ವಿಜಯಪ್ರಸಾದ ಹಾಗೂ ಪಿಎಸ್ಐ ನಿಶ್ಚಲಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.