ನಗರ ಸಂಚಾರ ಆರಂಭಿಸಿದ ಶಾಸಕ ರಫೀಕ್
ಕ.ಪ್ರ. ವಾರ್ತೆ ತುಮಕೂರು ಮೇ 27
ತುಮಕೂರು ನಗರ ನೂತನ ಶಾಸಕ ಕಾಂಗ್ರೆಸ್ನ ಡಾ. ರಫೀಕ್ ಅಹಮದ್ ನಗರ ಸಂಚಾರ ಆರಂಭಿಸಿದ್ದಾರೆ. ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿರುವ ಶಾಸಕರು ನಗರದಲ್ಲಿ ಅಂದಾಜು 409 ಕೋಟಿ ರು. ಕಾಮಗಾರಿ ಬಾಕಿ ಉಳಿದಿವೆ. ಬಹುತೇಕ ಈ ಕಾಮಗಾರಿಗಳು ಮುಂದಿನ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದು ರಫೀಕ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಮಾವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಸಮ್ಮುಖದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಫೀಕ್ ಅಹಮದ್, ಅಳಿದುಳಿದ ಕಾಮಗಾರಿಗಳನ್ನು ಮುಂದಿನ ಡಿಸೆಂಬರ್ ವೇಳೆಗೆ ಶತಾಯ-ಗತಾಯ ಮುಗಿಸಲು ಪ್ರಯತ್ನಿಸಲಾಗುವುದು. ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ವಿಷಯ ಚರ್ಚಿಸಿರುವುದಾಗಿ ಮಾಹಿತಿ ನೀಡಿದರು.
ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಹಿನ್ನೆಲೆಯಲ್ಲಿ 49 ಬೋರ್ವೆಲ್ಗಳನ್ನು ಕೊರೆಸಲಾಗಿದ್ದು, ಶೀಘ್ರದಲ್ಲೇ ಮೋಟಾರ್ ಪಂಪ್ ಅಳವಡಿಸಿ, ನೀರು ಸರಬರಾಜು ಮಾಡಲಾಗುವುದು ಎಂದರು. ಒಟ್ಟು 105 ಬೋರ್ವೆಲ್ಗಳನ್ನು ಕೊರೆಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬುಗುಡನಹಳ್ಳಿ ಕೆರೆ ನೀರು 41 ದಿನ ಮಾತ್ರ: ಹಾಲಿ ತುಮಕೂರು ನಗರಕ್ಕೆ ಕುಡಿಯುವ ನೀರೊದಗಿಸುತ್ತಿರುವ ಬುಗುಡನಹಳ್ಳಿ ಕೆರೆ ನೀರು 41 ದಿನಗಳಿಗಾಗುವಷ್ಟಿದೆ. ಸದ್ಯ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕುಡಿಯುವ ನೀರಿಗಾಗಿ ನಗರಸಭೆ ಸುಮಾರು 3.5 ಕೋಟಿ ರು. ಕರೆಂಟ್ ಬಿಲ್ ವ್ಯಯಿಸಿದೆ. ಇದರಲ್ಲಿ 1.25 ಕೋಟಿ ರು. ಬಾಕಿ ನೀಡಬೇಕಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಬಾಕಿಯಿರುವ ಕಾಮಗಾರಿಗಳು: 2007-08 ರಲ್ಲಿ ಬಿಡುಗಡೆಯಾಗಿರುವ 40 ಕೋಟಿ ರು. ಅನುದಾನದಲ್ಲಿ 5.40 ಕೋಟಿ ರು. ಕಾಮಗಾರಿ ಬಾಕಿಯಿದೆ. 2010 -11 ರಲ್ಲಿ ಬಿಡುಗಡೆಯಾಗಿರುವ 100 ಕೋಟಿ ರು. ಕಾಮಗಾರಿಗಳಲ್ಲಿ 75 ಕೋಟಿ ರು. ಬಾಕಿ ಕಾಮಗಾರಿಯಿದೆ. 2011-12 ನೇ ಸಾಲಿನಲ್ಲಿ 42 ಕೋಟಿ ರು. ಪೈಕಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. 2 ನೇ ಹಂತದ ಪಟ್ಟಣ ಅಭಿವೃದ್ಧಿಗೆ 30 ಕೋಟಿ ರು. ಕಾಮಗಾರಿ ಆರಂಭವಾಗಬೇಕಿದೆ. 2011-12 ನೇ ಸಾಲಿಗೆ ಎಸ್ಎಸ್ಐಸಿ ಅನುದಾನವನ್ನು ಕಾಮಗಾರಿಗೆ ನೀಡಲಾಗಿದೆ. ಅದೇ ರೀತಿ 2012-13 ನೇ ಸಾಲಿಗೆ ಎಸ್ಎಸ್ಐಸಿ ಅನುದಾನ 6.50 ಕೋಟಿ ರು. ಕಾಮಗಾರಿಗೆ ಅನುದಾನ ನೀಡಲಾಗಿದೆ. ಟೂಡಾದಿಂದ ಅಮಾನಿಕೆರೆ ಗಾಜಿನ ಮನೆ ನಿರ್ಮಾಣಕ್ಕೆ 4 ಕೋಟಿ ರು. ಮಂಜೂರಾತಿ ಹಂತದಲ್ಲಿದೆ. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 150 ಕೋಟಿ ರು. ಮಂಜೂರಾತಿ ನಿರೀಕ್ಷೆಯಲ್ಲಿದೆ. ಕೆಯುಡಬ್ಲ್ಯೂಎಸ್ ವತಿಯಿಂದ 91.83 ಕೋಟಿ ರು. ಕೆಲಸ ಬಾಕಿಯಿದೆ ಎಂದು ಡಾ. ರಫೀಕ್ ಅಹಮದ್ ಮಾಹಿತಿ ನೀಡಿದರು.
ಮೇಲಿನ ಬಾಕಿ ಕಾಮಗಾರಿಗಳು ಹಿಂದಿನ ಸರ್ಕಾರದ್ದಾಗಿವೆ. ಇದನ್ನು ಸೇರಿಸಿ ತಮ್ಮ ಸರ್ಕಾರದ ವತಿಯಿಂದ ಸುಮಾರು 450 ರಿಂದ 500 ಕೋಟಿ ರು. ಮೊತ್ತದ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ತುಮಕೂರು ನಗರಸಭೆ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಫೀಕ್ ಅಹಮದ್ ತಿಳಿಸಿದರು.
ವಿವಿಧ ಇಲಾಖೆಗಳು: ಮೇಲಿನ ಕಾಮಗಾರಿಗಳು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ, ಕೊಳಚೆ ನಿರ್ಮೂಲನಾ ಮಂಡಳಿ, ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಸೇರಿವೆ ಎಂದು ಶಾಸಕರು ತಿಳಿಸಿದರು.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಗಳನ್ನೊಳಗೊಂಡಂತೆ ವಿವಿಧ ರಸ್ತೆ ಅಭಿವೃದ್ಧಿ ಕೆಲಸ ಮತ್ತು ಡಾಂಬರೀಕರಣ ಕಾರ್ಯ. ಪ್ರಗತಿಯಲ್ಲಿರುವ ವಿವಿಧ ವಾರ್ಡ್ಗಳ ಡಾಂಬರೀಕರಣಗೊಳ್ಳುತ್ತಿರುವ ರಸ್ತೆಗಳನ್ನು ಮತ್ತು ಉದ್ದೇಶಿತಗೊಂಡಿರುವ ರಸ್ತೆಗಳನ್ನು ಮತ್ತು ಚರಂಡಿಗಳ ಕಾಮಗಾರಿಗಳನ್ನು ಅತಿ ಶೀಘ್ರವಾಗಿ ಕೈಗೆತ್ತಿಕೊಂಡು ಸಂಪೂರ್ಣಗೊಳಿಸುವುದು. ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆ ಅಪೂರ್ಣ ಕಾಮಗಾರಿ (ವಿದ್ಯುತ್ ದೀಪ ಸೇರಿದಂತೆ) ಪೂರೈಸಲು ಅಂದಾಜು 5 ಕೋಟಿ ರು. ಅವಶ್ಯಕತೆಯಿದೆ. ಹಲವು ವಾರ್ಡ್ಗಳಲ್ಲಿ ವಿಶೇಷವಾಗಿ ಹರಿಜನರ ಕಾಲೋನಿಗಳಲ್ಲಿ ಕಾಂಕ್ರೀಟ್ ಚರಂಡಿ ಮತ್ತು ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡುವುದು. ತುಮಕೂರು ನಗರ ನ್ಯಾಯಾಲಯದ ಸಂಕೀರ್ಣ ಒಂದನೇ ಮತ್ತು ಎರಡನೇ ಅಂತಸ್ತಿನ ನಿರ್ಮಾಣ ಕಾಮಗಾರಿಯನ್ನು ಅತಿ ಶೀಘ್ರವಾಗಿ ಮುಗಿಸುವುದು ಹಾಗೂ ಹಲವು ಟೆಂಡರ್ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳನ್ನು ಪುನರ್ ಪರಿಶೀಲಿಸಿ ಮರು ಟೆಂಡರ್ ಕರೆದು ಅಂತಹ ಕಾಮಗಾರಿಗಳನ್ನು ಅತಿ ಶೀಘ್ರವಾಗಿ ಆರಂಭಿಸಲಾಗುವುದು ಎಂದು ರಫೀಕ್ ಅಹಮದ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ಮುಖಂಡರಾದ ವೇಣುಗೋಪಾಲ್ ಸಿಮೆಂಟ್ ಮಂಜುನಾಥ್, ಸೈಯದ್ ಖಲಂದರ್, ವಕ್ತಾರ ಜಕಣಾಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.