ಮಟ್ಕಾ ದಂಧೆ ಮತ್ತೆ ತಲೆ ಎತ್ತಿದರೆ ಕಠಿಣ ಕ್ರಮ'
ಪಾವಗಡ: ಜನಸಾಮಾನ್ಯರು ಸೇರಿದಂತೆ ಬಡಕುಟುಂಬಗಳ ಶಾಂತಿ ನೆಮ್ಮದಿಗಾಗಿ ಪಟ್ಟಣದಲ್ಲಿ ಮಟ್ಕಾ ದಂಧೆ ಸಂಪೂರ್ಣ ಬಂದ್ ಮಾಡಲಾಗಿದ್ದು ಮತ್ತೆ ತಲೆ ಎತ್ತಿದರೆ ಕಠಿಣ ಕ್ರಮ ಜರಿಗಿಸುವುದಾಗಿ ಪಾವಗಡ ಪೊಲೀಸ್ ಠಾಣೆ ಪಿಎಸ್ಐ ರಾಮಕೃಷ್ಣಯ್ಯ ಎಚ್ಚರಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಮಟ್ಕಾ ದಂಧೆ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಣ್ಣು ಇಟ್ಟಿದ್ದು ಈ ದಂಧೆಯಲ್ಲಿ ನಿರತರಾದವರ ವಿರುದ್ಧ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ ಎಂದರು. ಪಾವಗಡ ವೃತ್ತ ಸಿಪಿಐ ಭಾನುಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಿ ಪಟ್ಟಣದಲ್ಲಿ ಶೋಧ ಮಾಡುವ ಮೂಲಕ ಕಳೆದ 2ದಿನಗಳಿಂದ ಮಟ್ಕಾ ದಂಧೆಗೆ ಕಡಿವಾಣ ಹಾಕಲಾಗಿದೆ ಎಂದ ಅವರು ನಮ್ಮ ವ್ಯಾಪ್ತಿಯಲ್ಲಿ ಕದ್ದು ಮುಚ್ಚಿ ಏನಾದರೂ ಮಟ್ಕಾ ದಂಧೆ ಮುಂದುವರಿದರೆ ಆ ದಂಧೆಯ ರೂವಾರಿಗಳ ವಿರುದ್ಧ ಕ್ರಮ ಜರುಗಿಸಿ ಕಾನೂನು ರೀತ್ಯ ಗಡಿಪಾರು ಮಾಡುವುದಾಗಿ ಎಚ್ಚರಿಸಿದರು. ಈ ದಂಧೆಗೆ ಪ್ರತಿದಿನ ಅನೇಕ ಕುಟುಂಬಗಳು ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿದ್ದಾರೆ.