ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೂವರು ಅಂತರರಾಜ್ಯ ಕೊಲೆ, ಸುಲಿಗೆಗಾರರ ಬಂಧನ

Rashmi Kasaragodu
Updated On : 28 May 2013, 12:17 pm

ಕ.ಪ್ರ. ವಾರ್ತೆ   ಕುಣಿಗಲ್   ಮೇ 27
ಮೊಬೈಲ್ ಕರೆ ಪತ್ತೆಹಚ್ಚುವ ತಂತ್ರಜ್ಞಾನದ ನೆರವಿನಿಂದ, ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಕುಣಿಗಲ್ ಪೊಲೀಸರು, ಮೂವರು ಅಂತರರಾಜ್ಯ ಕೊಲೆ, ಸುಲಿಗೆಗಾರನ್ನು ಬಂಧಿಸಿ, ಲಕ್ಷಾಂತರ ರು.ಮೌಲ್ಯದ ಕಳುವು ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ ಪೊಲೀಸ್ಠಾಣಾ ವ್ಯಾಪ್ತಿಯ ಪುರಸಭೆ ಘನತ್ಯಾಜ್ಯ ವಿಲೆವಾರಿಘಟಕದ ಸಮೀಪ ಏಪ್ರಿಲ್ 1, 2013ರಂದು 25 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿ, ಶವ  ಎಸೆದು ಹೋಗಿರುವುದು ಪತ್ತೆಯಾಗಿ, ಪ್ರಕರಣ ದಾಖಲಾಗಿತ್ತು. ಮೃತವ್ಯಕ್ತಿಯ ಶರ್ಟ್ನ ಲೇಬಲ್ ಹಿಡಿದು ವಿಳಾಸ ಪತ್ತೆಗೆ ಹೊರಟ ಪೊಲೀಸರಿಗೆ ಸೂಕ್ತ ಮಾಹಿತಿ ಸಿಗದೆ, ಪ್ರಕರಣ ಭೇದಿಸುವುದು ಸವಾಲಿನ ಸಂಗತಿಯಾಗಿತ್ತು. ಈ ಮಧ್ಯೆ ಹುಲಿಯೂರುದುರ್ಗದ ಸಮೀಪದ ರೈತನಿಗೆ ಮೊಬೈಲ್ ಸಿಕ್ಕಿದ್ದು, ಆ ಮೊಬೈಲ್ಗೆ ನಿರಂತರವಾಗಿ ಲಾರಿ ಮಾಲೀಕನೊಬ್ಬನ ಕರೆ ಬರತೊಡಗಿತ್ತು.
ಮಾಹಿತಿ ನೀಡಿದ ಶಬ್ಬೀರ್: ತನ್ನ ಫೋನ್ನನ್ನು ಅಪರಿಚಿತ ವ್ಯಕ್ತಿ ಸ್ವೀಕರಿಸುತ್ತಿರುವ ಬಗ್ಗೆ ಸಂದೇಹಗೊಂಡ ಲಾರಿ ಮಾಲೀಕ ಶಬ್ಬೀರ್, ಫೋನ್ ಪತ್ತೆಹಚ್ಚಿ, ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಿದರಲ್ಲದೆ, ತನ್ನ ಲಾರಿ ಕಳುವಾಗಿರುವ ಬಗ್ಗೆ ಸಹ ದೂರು ನ್ದೀರು. ಮೃತನ ಚಹರೆಯನ್ನು ಲಾರಿ ಮಾಲೀಕನಿಗೆ ತೋರಿಸಿದಾಗ, ಸದರಿ ವ್ಯಕ್ತಿ ತನ್ನ ಲಾರಿ ಚಾಲಕ, ನಾಗವಲ್ಲಿ ಗ್ರಾಮದ ಮುಜಾಹಿದ್ ಎಂದು, ಮದ್ದೂರಿನಿಂದ ಮುಂಬೈಗೆ ಎಳೆನೀರು ಸಾಗಿಸುವ ಲಾರಿಗೆ ಚಾಲಕನಾಗಿದ್ದ ಎಂದು ಗುರುತಿಸಿದ ಮೇರೆಗೆ, ಮೃತನ ವಿಳಾಸ ಪತ್ತೆಯಾಗಿ ಪೊಲೀಸರ ಒಂದು ಹಂತದ ಕೆಲಸ ಮುಗಿಯಿತು.
   ಆದರೆ, ಕೊಲೆಗಾರರ ಪತ್ತೆ ಬಗ್ಗೆ ಜಿಲ್ಲಾ ಎಸ್ಪಿ ರಮಣಗುಪ್ತ, ಅಡಿಷನಲ್ ಎಸ್ಪಿ ಹನುಮಂತರಾಯ, ಡಿಎಸ್ಪಿ ಉಮಾರಾಣಿ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಸಿಪಿಐ ಧಮೇಂದ್ರ, ಪಿಎಸೈ ಶೇಷಾದ್ರಿ, ಸಿಬ್ಬಂದಿಗಳಾದ ಪರಮೇಶ್ವರ್, ಸತೀಶ್, ಯಶೋಧರ, ಶ್ರೀನಿವಾಸ ಮತ್ತು ಪ್ರಶಾಂತ್ ಕೊಲೆಯಾದ ಲಾರಿ ಚಾಲಕನ ಮೊಬೈಲ್ಗೆ ಬಂದ ಕರೆಗಳನ್ನು ಕ್ರೋಢೀಕರಿಸಿ ಹೆಚ್ಚಿನದಾಗಿ ಕರೆ ಮಾಡಿರುವ ಬಗ್ಗೆ ಮಹಿತಿ ಸಂಗ್ರಹಿಸಿದರು. ಇದರ ಜೊತೆಯಲ್ಲೆ ಲಾರಿ ಯಾವ, ಯಾವ ಟೋಲ್ಪ್ಲಾಜಾಗಳ ಮೂಲಕ ಸಂಚರಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಆಂತಿಮವಾಗಿ ಲಾರಿ  ಆಂಧ್ರಪ್ರದೇಶದ ಹೈದ್ರಾಬಾದ್ ಕಡೆಗೆ ತೆರಳಿರುವುದು ಪತ್ತೆಯಾಯಿತು.
   ಇದರ ಜೊತೆಯಲ್ಲಿ ಒಂದೇ ಸಮನೇ ಕೊಲೆಯಾದ ವ್ಯಕ್ತಿಗೆ ಕರೆ ಮಾಡಿದ್ದ ಆತನ ಸ್ನೇಹಿತನ ಸಿಮ್ ನಂಬರ್ ಲೋಕೇಶನ್ ಮೇಲೆ ಗಮನ ಹರಿಸಿದ ಪೊಲೀಸರು, ಸದರಿ ವ್ಯಕ್ತಿಯ ಸಿಮ್ ಸಹ ಲಾರಿಯ ಜೊತೆಯಲ್ಲೆ ತೆರಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ಆರೋಪಿ ನದಿಮ್ನನ್ನು ವಶಕ್ಕೆ ಪಡೆದರು. ವಿಚಾರಣೆ ತೀವ್ರಗೊಳಿಸಿದ ಮೇರೆಗೆ, ನದೀಂ ತಾನು ಹಾಗೂ ತನ್ನ ಸ್ನೇಹಿತರಾದ ಶೋಯಿಬ್ ಖಾನ್, ತೌಫಿಕ್ಪಾಶ ಸೇರಿ, ಲಾರಿಯನ್ನು ಅಪರಹರಿಸಿ, ಮಾರಿ ಬಂದ ಹಣದಿಂದ ಸುಖವಾಗಿ ಜೀವನ ಸಾಗಿಸುವ ಸಲುವಾಗಿ ಮುಜಾಹಿದ್ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೂವರು ಬೆಂಗಳೂರಿನ ಕೆಂಗೇರಿ ಉಪನಗರದ ಬೀಡಿ ಕಾಲೋನಿ ವಾಸಿಗಳಾಗಿದ್ದಾರೆ.
ಬಹದ್ದೂರ್ ನಗರದಲ್ಲಿ ಮಾರಾಟ ಕದ್ದ ಲಾರಿಯನ್ನು ಹೈದ್ರಾಬಾದ್ನ ಬಹದ್ದೂರ್ ನಗರದಲ್ಲಿ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ ಮೇರೆಗೆ, ಹೈದ್ರಾಬಾದ್ ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ಕುಣಿಗಲ್ ಪೊಲೀಸರು 11 ಲಕ್ಷ ರು.ಮೌಲ್ಯದ ಕಳವು ಮಾಲು ವಶಪಡಿಸಿಕೊಂಡು, ಲಾರಿ ಮಾರಾಟಕ್ಕೆ ಸಹಕರಿಸಿದ ಖದೀರ್ ಎಂಬುವನ್ನು ವಶಕ್ಕೆ ಪಡೆದಿದ್ದಾರೆ. ಸರದಾರ್ ಹಾಗೂ ಖಾದರ್ ಎಂಬುವವರು ಪರಾರಿಯಾಗಿದ್ದಾರೆ.  ಮೊಬೈಲ್ ಕರೆಯ ಆಧಾರಗಳ ಮೇಲೆ ಕ್ಲಿಷ್ಟವಾಗಿದ್ದ ಅಂತರರಾಜ್ಯ ಕೊಲೆ, ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಕುಣಿಗಲ್ ಪೊಲೀಸರ ತಂಡಕ್ಕೆ ಜಿಲ್ಲಾ ಎಸ್ಪಿ ಬಹುಮಾನ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement