ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ
ಕ.ಪ್ರ. ವಾರ್ತೆ ಪಾವಗಡ ಮೇ 27
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಮೂಲಕ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನಲ್ಲಿ ರೈತರು ಮಾಡಿದ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪೊನ್ನಸಮುದ್ರ ಅಂಜನರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ಪಟ್ಟಣದ ಪಿಎಲ್ಡಿ ಬ್ಯಾಂಕಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಜನರೆಡ್ಡಿ ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ಪ್ರದೇಶಗಳ ಪಟ್ಟಿಗೆ ಸೇರಿದ ಪಾವಗಡ ತಾಲೂಕು ಕಳೆದ 15 ವರ್ಷಗಳಿಂದ ಮಳೆ ಇಲ್ಲದೇ ಬೆಳೆ ನಷ್ಟವಾಗಿ ಇಲ್ಲಿನ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಲದೇ ಬ್ಯಾಂಕುಗಳಲ್ಲಿ ಮಾಡಿದ ಸಾಲ ತೀರಿಸಲಾಗದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಇಲ್ಲಿನ ಪಿಎಲ್ಡಿ ಬ್ಯಾಂಕಿನಿಂದ ಪಡೆದ 70 ಕೋಟಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ ಬಡ ರೈತರ ಅಭಿವೃದ್ಧಿಗೆ ಸಹಕರಿಸುವಂತೆ ರೈತಪರ ಕಾಳಜಿಯುಳ್ಳ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಅವರು ಮಾಡಿದರು.
ಭೀಕರ ಬರ: ಕಳೆದ 15ವರ್ಷಗಳಿಂದ ತಾಲೂಕು ಬರಕ್ಕೆ ತುತ್ತಾಗಿದ್ದು ಈ ಹಿಂದಿನ ವರ್ಷ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿತ್ತು. 2012-13ನೇ ಸಾಲಿನಲ್ಲಿ ಇದುವರೆವಿಗೂ ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ. ಬ್ಯಾಂಕ್ ಸಾಲ ಸೇರಿದಂತೆ ಜನ ಜೀವನ ಸಂಕಷ್ಟಕಿಡಾಗಿದ್ದು ಜೀವನೋಪಾಯಕ್ಕೆ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿದ ಅವರು ಸಹಕಾರಿ ಬ್ಯಾಂಕಿನಿಂದ ಪಡೆದ ರೈತರ ಸಾಲ ವಸೂಲಾತಿ ಆಗದ ಕಾರಣ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ನಿರ್ದೇಶಕರ ಸಭೆ ಕರೆದು ಚರ್ಚಿಸಲಾಯಿತು. ಸಾಲ ವಸೂಲಾತಿಗೆ ಬಹಳ ತೊಂದರೆಗಳಿದ್ದು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ರೈತರು ಬಿತ್ತನೆ ಬೀಜ ಖರೀದಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ತಾಲೂಕಿನಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದ್ದು ಪರಿಣಾಮ ಜಾನುವಾರುಗಳ ಮೇವು ಸೇರಿದಂತೆ ನೀರಾವರಿ ಬೆಳೆಗಳು ಪ್ರತಿ ವರ್ಷ ನಷ್ಟಕ್ಕೀಡಾಗಿ ತಿನ್ನುವ ಆಹಾರಕ್ಕೂ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುವುದಾಗಿ ತಿಳಿಸಿದರು.
ಮನವಿ: ಮಳೆ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಜಮೀನುಗಳು ಉಳಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಅವರು ತಾಲೂಕಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಿ ರೈತರಿಗೆ ಉಚಿತವಾಗಿ ನೆಲಗಡಲೇ ಬಿತ್ತನೆ ಬೀಜ ಸರಬರಾಜು ಮಾಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಬ್ಯಾಂಕಿನ ಮಾಜಿ ಅಧ್ಯಕ್ಷ ಎಸ್.ವಿ.ಗೋವಿಂದಪ್ಪ ಮಾತನಾಡಿ ಸರ್ಕಾರ ಎತ್ತೆಚ್ಚುಕೊಂಡು ಕೃಷಿ ಸಾಲ ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆ ತಡೆಯುವಂತೆ ಸಿಎಂ ಅವರಲ್ಲಿ ಮನವಿ ಮಾಡಿದರು.
ಹಿರಿಯ ಮುಖಂಡ ಬ್ಯಾಂಕ್ ನಿರ್ದೇಶಕ ಬೆಟ್ಟದ ಈರಣ್ಣ ಮಾತನಾಡಿ ಎಸ್ಸಿ, ಎಸ್ಟಿ ಸೇರಿದಂತೆ ಸಣ್ಣ ರೈತರ ಸಾಲ ಮನ್ನಾ ಮಾಡಿದ ಸಿಎಂ ಸಿದ್ದರಾಮಯ್ಯ ಪಕ್ಕದ ಆಂಧ್ರ ಮಾದರಿಯಂತೆ ರೈತರಿಗೆ ಅನುಕೂಲ ಕಲ್ಪಿಸಲು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ನಿರ್ದೇಶಕ ಪೊತಗಾನಹಳ್ಳಿ ಮಹಾಲಿಂಗಪ್ಪ, ಮುಖಂಡ ಕೇಶವ ಚಂದ್ರದಾಸ್ ಮುಂತಾದವರಿದ್ದರು.