ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸರ್ಕಾರಿ ಅರಣ್ಯ ಪ್ರದೇಶ ಬಲಾಢ್ಯ ವ್ಯಕ್ತಿಗಳಿಂದ ಅತಿಕ್ರಮಣ

Rashmi Kasaragodu
Updated On : 28 May 2013, 12:16 pm

ಕ.ಪ್ರ. ವಾರ್ತೆ   ಕುಣಿಗಲ್   ಮೇ 27
ಸರ್ಕಾರಿ ಅರಣ್ಯ ಪ್ರದೇಶವನ್ನು ರಾಜಕೀಯ ಬಲಾಡ್ಯ ವ್ಯಕ್ತಿ ಹಾಗೂ ಅವರ ಸಂಬಂಧಿಕರು ಅತಿಕ್ರಮಿಸಿ ಮನೆಗಳನ್ನು ನಿರ್ಮಿಸಿ, ಜಮೀನಿನಲ್ಲಿ ತೋಟಮಾಡಿಕೊಂಡಿರುವುದು ದೃಢಪಟ್ಟಿದ್ದರೂ ಕಳೆದ ಎರಡು ವರ್ಷದಿಂದ ಕಡತ ತಹಸೀಲ್ದಾರ್ ಕಚೇರಿಯಲ್ಲಿ ಧೂಳು ಹಿಡಿಯುತ್ತಿದ್ದು ಅಧಿಕಾರಿಗಳು ಕಂಡೂಕಾಣದವರಂತಿದ್ದಾರೆ ಎಂದು ಪ್ರಕಾಶ್ ಎಂಬುವವರು ಲೋಕಾಯುಕ್ತ ನಿರೀಕ್ಷಕರಿಗೆ ದೂರು ಸಲ್ಲಿಸಿದರು.
ಸೋಮವಾರ, ಪಟ್ಟಣದ ಕಂದಾಯಭವನದಲ್ಲಿ ಲೋಕಾಯುಕ್ತ ಅಧೀಕ್ಷಕರ ಪರವಾಗಿ ನಿರೀಕ್ಷಕ ಗೌತಮ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು, ಮಲ್ಲಾಘಟ್ಟದ ಪ್ರಕಾಶ್ ಎಂಬುವವರು, ತರೇದಕುಪ್ಪೆ ಸರ್ವೆ ನಂಬರ್ 205ರಲ್ಲಿ 35 ಎಕರೆಗೂ ಹೆಚ್ಚು ಸರ್ಕಾರಿ ಅರಣ್ಯಭೂಮಿ ಇದ್ದು, ಸದರಿ ಸರ್ಕಾರಿ ಭೂಮಿಯನ್ನು ಬಲಾಢ್ಯರು ಅತಿಕ್ರಮಿಸಿ, ಮನೆ, ತೋಟ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್ಗೆ ದೂರು ನೀಡಿದ ಮೇರೆಗೆ ಪ್ರಕರಣದ ತನಿಖೆ ನಡೆಸಿ ಒತ್ತುವರಿ ಮಾಡಿರುವುದು ಸಾಬೀತಾಗಿದೆ ಎಂದು ವರದಿಯಾಗಿ ಎರಡು ವರ್ಷ ಕಳೆದರೂ, ತೆರವಿಗೆ ಮುಂದಾಗಿಲ್ಲ. ಸಾರ್ವಜನಿಕ ಪ್ರದೇಶ ಸಂರಕ್ಷಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ. ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಅಹವಾಲು ಸಲ್ಲಿಸಿದರು.
ವರದಿ ಸಲ್ಲಿಸಿ: ಅಹವಾಲು ಸ್ವೀಕರಿಸಿದ ನಿರೀಕ್ಷಕರು, ಕೂಡಲೆ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಇನ್ನು ಕೊತ್ತಗೆರೆ ಸಮೀಪದ ಗ್ರಾಮವೊಂದರಲ್ಲಿ ಹೇಮಾವತಿ ನಾಲಾ ಉದ್ದೇಶಕ್ಕೆ ವಶಪಡಿಸಿಕೊಂಡಿರುವ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಇಟ್ಟಿಗೆ ಗೂಡು ನಡೆಸುತ್ತಿದ್ದರೂ, ನಾಲಾ ಅಧಿಕಾರಿಗಳು ಕ್ರಮ ನಾಲೆಯ ಜಾಗ ಸಂರಕ್ಷಣೆಗೆ ಕೈಗೊಂಡಿಲ್ಲ ಎಂದು ಅಂದಾನಯ್ಯ ಎಂಬುವವರು ದೂರು ನೀಡಿದ ಮೇರೆಗೆ, ನಾಲಾ ವಲಯದ ಎಇಇ ಶಿವರಾಮಯ್ಯನವರಿಗೆ ಸೂಚನೆ ನೀಡಿದ ಲೋಕಾಯುಕ್ತ ನಿರೀಕ್ಷಕ ಕೂಡಲೆ ತೆರವುಗೊಳಿಸಿ, ಶೀಘ್ರದಲ್ಲೆ ವರದಿ ಸಲ್ಲಿಸಲು ಸೂಚಿಸಿದರು.
6 ಅಹವಾಲು: ಸೋಮವಾರ ಒಟ್ಟಾರೆ ಆರು ಅಹವಾಲುಗಳು ಬಂದಿದ್ದು ನಾಲ್ಕು ಕಂದಾಯ ಇಲಾಖೆ ಹಾಗೂ ಎರಡು ತಾಪಂ ವಿಭಾಗಕ್ಕೆ ಸೇರಿದ್ದವಾಗಿದ್ದವು. ಹಳೇಯ ಅಹವಾಲುಗಳ ಪೈಕಿ ಎಲ್ಲವನ್ನು ವಿಲೆವಾರಿ ಮಾಡಲಾಗಿದೆ ಎಂದ ನಿರೀಕ್ಷಕ ಗೌತಮ್, ಮುಂದಿನ ದಿನಗಳಲ್ಲಿ ಲೋಕಾಯುಕ್ತ ಅಧೀಕ್ಷಕರು ಅಹವಾಲು ಸ್ವೀಕರಿಸುವ ಬಗ್ಗೆ ಗ್ರಾಪಂ ಸೇರಿದಂತೆ ತಾಲೂಕು ಕಚೇರಿ ಹಾಗೂ ತಾಪಂ ಕಚೇರಿ ಸೇರಿದಂತೆ ವಿವಿಧೆಡೆ ಬ್ಯಾನರ್ ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಅಹವಾಲು ಸಲ್ಲಿಸಿದ ಅರ್ಜಿದಾರರಿಗೆ ನಿಗದಿತ ಅವಧಿಯೊಳಗೆ ಹಿಂಬರಹ ನೀಡಿ, ಅದರ ವರದಿಯನ್ನು ಲೋಕಾಯುಕ್ತ ಅಧೀಕ್ಷಕರಿಗೆ ಸಲ್ಲಿಸುವಂತೆ ವಿಳಂಬವಾದಲ್ಲಿ ಮಧ್ಯಂತರ ಹಿಂಬರಹ ನೀಡುವಂತೆ ಸೂಚನೆ ನೀಡಿ, ಯಾವುದೇ ಕಾರಣಕ್ಕೂ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಅನಗತ್ಯ ವಿಳಂಬ ಸಲ್ಲ ಎಂದರು.
ತಹಸೀಲ್ದಾರ್ ಜಗದೀಶ್, ತಾಪಂ ಇಒ ಡಾ.ರಾಮಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಯ ಅದಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement