ಅಲೆಮಾರಿ ದೊಂಬಿದಾಸರು ರಾಜಕೀಯ ಪ್ರವೇಶ ಮಾಡಲಿ
ಕ.ಪ್ರ. ವಾರ್ತೆ ತುಮಕೂರು ಮೇ 28
ಅಲೆಮಾರಿ ದೊಂಬಿದಾಸರು ಅನಿವಾರ್ಯವಾಗಿ ರಾಜಕೀಯ ಪ್ರವೇಶ ಮಾಡಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ದೊಡ್ಮನೆ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ನಡೆಯಲಿರುವ ದೊಂಬಿದಾಸ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸೌಲಭ್ಯವಂಚಿತ ಸಮುದಾಯಗಳಲ್ಲಿ ದೊಂಬಿದಾಸರು ಪ್ರಥಮರಾಗಿದ್ದಾರೆ. ಹೀಗಾಗಿ ಅವರು ರಾಜಕೀಯ ಪ್ರವೇಶ ಮಾಡುವುದು ಅಗತ್ಯವೂ, ಅನಿವಾರ್ಯವೂ ಆಗಿದೆ ಎಂದರು.
ದೊಂಬಿದಾಸರ ಮಕ್ಕಳು ತಮ್ಮ ಪೋಷಕರ ಜತೆಜತೆಯಲ್ಲೇ ಸಂಚಾರ ಮಾಡುತ್ತಿರುವುದರಿಂದ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಅನೇಕ ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸೌಲಭ್ಯ ಪಡೆಯಲು ರಾಜಕೀಯ ಪ್ರವೇಶ ಮಾಡುವಂತೆ ಕರೆ ನೀಡಿದರು.
ಈ ಹಿನ್ನೆಲೆಯಲ್ಲಿ ಗ್ರಾಮ, ತಾಲೂಕು ಮಟ್ಟದಿಂದ ಪ್ರಜ್ಞಾವಂತ ಯುವ ಜನತೆ ಯಾವುದೇ ಆತಂಕಗಳಿಗೆ ಎದೆಗುಂದದೆ ಧೈರ್ಯದಿಂದ ಮುಂದೆ ಬಂದು ಸಮುದಾಯದಿಂದ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸಾಧನಾ ರವಿಕುಮಾರ್ ಅವರು ಜನಾಂಗ ಮೌಢ್ಯತೆಯನ್ನು ಬಿಟ್ಟು ನಾಗರಿಕ ಸಮಾಜದಲ್ಲಿ ಬಾಳಬೇಕಾದರೆ ಸಂಘಟನೆಯನ್ನು ಬಲಪಡಿಸಿ ಹೋರಾಟ ಮಾಡಬೇಕಾಗಿದೆ ಎಂದರು.
ಈ ಮೂಲಕ ತಮ್ಮ ಜಾತಿ ಅಭಿಮಾನವನ್ನು ಬೆಳೆಸಿಕೊಂಡು ಸುಶಿಕ್ಷಿತರನ್ನಾಗಿ ಮಾಡಬೇಕಾಗಿದೆ. ಆದ್ದರಿಂದ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರಚೋದನೆಯನ್ನು ನೀಡಿ ಉನ್ನತ ವ್ಯಾಸಂಗಕ್ಕೆ ಪ್ರೇರೇಪಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಮ್ಮ ವಹಿಸಿದ್ದರು. ಗೌರವಾಧ್ಯಕ್ಷ ರಾಜಣ್ಣ, ಸಹಕಾರ್ಯದರ್ಶಿ ವೇದಮೂರ್ತಿ, ಉಪಾಧ್ಯಕ್ಷ ರಂಗನಾಥಪ್ಪ ಮತ್ತು ನಿರ್ದೇಶಕರು ಇದ್ದರು.