ಕನ್ನಡಭಾಷೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ
ಕುಣಿಗಲ್: ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ, ರಾಜ್ಯಮಟ್ಟದ ಸಭೆಯಲ್ಲಿ, ಕನ್ನಡ ಪ್ರೇಮ ವ್ಯಕ್ತಪಡಿಸಿರುವ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ರಮವನ್ನು, ತಾಲೂಕಿನ ಕನ್ನಡಪರ ಸಂಘಟನೆಗಳು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಲ್ಲಾ ಹಂತದಲ್ಲೂ ಕನ್ನಡಭಾಷೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವತ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿವೆ. ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್, ರಾಜ್ಯದ ಅಧಿಕಾರ ಚುಕ್ಕಾಣಿಯ ಪ್ರಮುಖ ಸೂತ್ರದಾರರಾದ ಮುಖ್ಯಮಂತ್ರಿಗಳು ಕನ್ನಡಭಾಷೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ಸಭೆಯಲ್ಲಿ ಒತ್ತಿಹೇಳಿರುವುದು ನಿಜಕ್ಕೂ ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಇದುವರೆಗೂ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳು ತಮ್ಮ ಆಡಳಿತಾವಧಿಯಲ್ಲಿ, ಈ ಮಟ್ಟಿಗೆ ಸ್ವಲ್ಪ ಪ್ರಮಾಣದ ಒತ್ತಡ ಹಾಕಿದ್ದರೂ, ನಿಜವಾಗಿಯೂ ಇಂದು ಕನ್ನಡನಾಡಿನಲ್ಲಿ ಕನ್ನಡ ಆಡಳಿತ ಭಾಷೆಯಾಗಿ ರೂಪುಗೊಂಡು, ಕನ್ನಡಿಗರ ಸ್ಥಾನಮಾನ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು. ನೂತನ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲೂ ಇದೇ ರೀತಿಯ ಕನ್ನಡಪ್ರೇಮ ವ್ಯಕ್ತಪಡಿಸುವ ಮೂಲಕ ಕನ್ನಡಭಾಷೆಯ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಬೇಕಿದೆ ಎಂದಿದ್ದಾರೆ. ತಾಲೂಕು ಕರವೇ (ನಾರಾಯಣಗೌಡ)ಬಣ ಅಧ್ಯಕ್ಷ ಮಂಜುನಾಥ್, ಸ್ವತಃ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ಕನ್ನಡಭಾಷೆಗೆ ಸರ್ಕಾರಿ ಯಂತ್ರದಲ್ಲಿ ದೊರಕುತ್ತಿರುವ ಮನ್ನಣೆ ಬಗ್ಗೆ ಸಂಪೂರ್ಣ ಅರಿವಿದ್ದ, ನೂತನ ಸಿಎಂ ಸಿದ್ದರಾಮಯ್ಯನವರು, ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಎಲ್ಲಾ ಹಂತದಲ್ಲೂ, ಕನ್ನಡ ಬಳಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿರುವುದು ನಿಜಕ್ಕೂ ಕನ್ನಡಿಗರ ಪಾಲಿಗೆ ಹರ್ಷದಾಯಕ ಸಂಗತಿಯಾಗಿದೆ. ಸಿಎಂ ಕ್ರಮ ನಿಜಕ್ಕೂ ಕನ್ನಡಿಗರಪಾಲಿಗೆ ಸಂತೋಷದಾಯಕವಾಗಿದ್ದು, ತಮ್ಮ ಅಧಿಕಾರವಧಿಯ ಪ್ರಾರಂಭದಲ್ಲಿ ಕನ್ನಡಭಾಷಾ ಪ್ರೇಮದ ಬಗೆಗೆ ಇರುವ ಕಾಳಜಿ ಅವರ ಅಧಿಕಾರವಧಿಯ ಸಂಪೂರ್ಣ ಕಾಲಕ್ಕೂ ಮೀಸಲಾಗಿ, ಅವರ ಕಾಲದಲ್ಲಾದರೂ ಕನ್ನಡಭಾಷೆ ಎಲ್ಲಾ ಹಂತದಲ್ಲೂ ಆಡಳಿತ ಭಾಷೆಯಾಗಿ ಅಭಿವೃದ್ದಿ ಹೊಂದಲು ಕ್ರಮ ಕೈಗೊಳ್ಳಬೇಕೆಂದಿದ್ದಾರೆ.