ಕರಡಿ ದಾಳಿ: ಗ್ರಾಮಸ್ಥನಿಗೆ ಗಾಯ
ಕ.ಪ್ರ. ವಾರ್ತೆ ಕುಣಿಗಲ್ ಮೇ 28
ಅರಣ್ಯ ಇಲಾಖಾಧಿಕಾರಿಗಳು ಕರಡಿ ಹಿಡಿಯಲು ಸಜ್ಜಾಗಿದ್ದ ವೇಳೆಯಲ್ಲಿ, ಇಲಾಖಾಧಿಕಾರಿಗಳಿಗೆ ಸಹಕರಿಸಲು ಬಂದಿದ್ದ ಗ್ರಾಮಸ್ಥನೋರ್ವ ಕರಡಿ ದಾಳಿಗೆ ಒಳಗಾದ ಘಟನೆ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಸಮೀಪದ ಸೀಗೆಪಾಳ್ಯ ಗ್ರಾಮದಲ್ಲಿ ನಡೆದಿದೆ.
ಸೀಗೇಪಾಳ್ಯ ಗ್ರಾಮದ ಸುತ್ತಮುತ್ತ ಕರಡಿ ಹಾವಳಿ ಹೆಚ್ಚಿರುವ ಬಗ್ಗೆ ಗ್ರಾಮಸ್ಥರ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ, ಕಾರ್ಯಪ್ರವೃತ್ತರಾದ ಅರಣ್ಯ ಇಲಾಖಾಧಿಕಾರಿಗಳು, ಬನ್ನೇರುಘಟ್ಟದಿಂದ ಪಶುವೈದ್ಯಕೀಯ ಸಿಬ್ಬಂದಿ, ಮಂಗಳವಾರ ಸೀಗೇಪಾಳ್ಯ ಗ್ರಾಮದ ಬಳಿ ಪೊದೆಯೊಳಗೆ ಕರಡಿ ಇರುವುನ್ನು ಪತ್ತೆಹಚ್ಚಿ, ಕರಡಿ ಹಿಡಿಯಲು ಸಿದ್ಧ ತೆಯಲ್ಲಿತೊಡಗಿದ್ದರು. ಈ ಹಂತದಲ್ಲಿ ಇಲಾಖಾಧಿಕಾರಿಗಳಿಗೆ ಸಹಕರಿಸಲು ಸ್ಥಳೀಯರಾದ ಸೋಮಶೇಖರ್ ಎಂಬಾತ, ಅಧಿಕಾರಿಗಳ ಸೂಚನೆ ಲೆಕ್ಕಿಸದೆ ಮುನ್ನುಗ್ಗಿದ ಪರಿಣಾಮ ಕರಡಿ ದಿಢೀರ್ ಪರಚಿ ಪೊದೆಯೊಳಗೆ ಸೇರಿಕೊಂಡಿತು. ಗಾಯಗೊಂಡನನ್ನು ಸೀಗೆಪಾಳ್ಯದ ಸೋಮಶೇಖರ್ (18) ಎಂದು ಗುರುತಿಸಲಾಗಿದ್ದು, ಕೂಡಲೆ ಆತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸೂಕ್ತ ಔಷಧಿಗಳು ಲಭ್ಯವಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ವಲಯ ಅರಣ್ಯಾಧಿಕಾರಿ ಚಿನ್ನಪ್ಪ ತಿಳಿಸಿದ್ದಾರೆ.