ಜಿಲ್ಲಾ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಸೋಣ: ಶಾಸಕ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಮೇ 28
ನಾಡುನುಡಿಯ ಬಗ್ಗೆ ನಾಡಿನ ಎಲ್ಲರು ಗೌರವ ಸಲ್ಲಿಸಬೇಕಾದ್ದು ಕರ್ತವ್ಯ. ಅದರಂತೆ ತಾಲೂಕಿನಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ನುಡಿದರು.
ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಅವಕಾಶ ನಮಗೆ ದೊರೆತಿರುವುದು ನಮ್ಮ ತಾಲೂಕಿನ ಸಾಹಿತ್ಯ ಪರಂಪರೆಗೆ ಸಂದ ಗೌರವ. ಅದನ್ನು ಉಳಿಸಿಕೊಳ್ಳ ಬೇಕಾದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಮ್ಮೇಳನದ ಯಶಸ್ಸಿಗೆ ಎಲ್ಲರು ಕೈ ಜೋಡಿಸೋಣ ಎಂದರು. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಕನ್ನಡಾಭಿಮಾನಿಗಳಿಗು ಉತ್ತಮ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಸಮ್ಮೇಳನದಲ್ಲಿ ಗುಣಾತ್ಮಕ ಗೋಷ್ಠಿಗಳನ್ನು ಏರ್ಪಡಿಸ ಬೇಕು ಎಂದರು. ನಂತರ ಮಾತನಾಡಿದ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ ಸಮ್ಮೇಳನದ ಉದ್ದೇಶ ತಾಲೂಕಿನ ಜನತೆಗೆ ಒಂದು ಒಳ್ಳೆಯ ಕಾರ್ಯಕ್ರಮವನ್ನು ಏರ್ಪಡಿಸುವುದಾಗಿದೆ. ಇದರಲ್ಲಿ ನಡೆಯುವ ಗೋಷ್ಠಿಗಳು ಒಂದೊಂದು ಸಹ ಗುಣಮಟ್ಟದ ಗೋಷ್ಠಿಗಳಾಗಿರುತ್ತವೆ. ಮೂರು ದಿನಗಳು ನಡೆಯುವ ಸಮ್ಮೇಳನದಲ್ಲಿ ದಿ.28ರಂದು ನಡೆಯುವ ಗೋಷ್ಠಿಗಳಲ್ಲಿ ಜಿಲ್ಲೆಯ ದಾಸಸಾಹಿತ್ಯ ಮತ್ತು ಶರಣ ಸಾಹಿತ್ಯದ ಬಗ್ಗೆ, ಹಾಗೆ ದಲಿತ ಮತ್ತು ಬಂಡಾಯ ಸಾಹಿತ್ಯದ ಬಗ್ಗೆ ಗೋಷ್ಠಿಗಳು, ಕೃಷಿ ಕ್ಷೇತ್ರದ ಸವಾಲುಗಳು ಮತ್ತು ಪರಿಹಾರ ಸಾಧ್ಯತೆ, ಜಲಸಂರಕ್ಷಣೆಯಲ್ಲಿ ಜನಸಮೂಹದ ಪಾತ್ರ,, ತೆಂಗು ಉತ್ಪನ್ನಗಳು ಮತ್ತು ಮಾರುಕ್ಟಟೆ ಲಭ್ಯತೆ, ಸಾಹಿತ್ಯ ಪಂಥಗಳಿಗೆ ಜಿಲ್ಲೆಯ ಕೊಡುಗೆ, ಜಿಲ್ಲೆಯ ಸಾಹಿತ್ಯ ಮತ್ತು ಸ್ತ್ರೀಸಂವೇದನೆ, ಮುಖ್ಯವೇದಿಕೆಯಲ್ಲಿ ಕವಿಗೋಷ್ಠಿ ಮತ್ತು ಅಧ್ಯಕ್ಷರೊಂದಿಗೆ ಸಂವಾದ ಮುಂತಾದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.