ಶಾಸಕರಿಂದ ದ್ವೇಷದ ರಾಜಕಾರಣ: ಪ್ರತಿಭಟನೆ ಎಚ್ಚರಿಕೆ
ಕ.ಪ್ರ.ವಾರ್ತೆ ತುರುವೇಕೆರೆ ಮೇ 28
ಶಾಸಕ ಎಂ.ಟಿ.ಕೃಷ್ಣಪ್ಪನವರು ಚುನಾವಣೆಯಲ್ಲಿ ಗೆದ್ದ ನಂತರ ಮನಸ್ಸಿಗೆ ಬಂದಂತೆ ವರ್ತನೆ ಮಾಡುತ್ತಿದ್ದಾರೆ. ಕೆಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಹಗೆ ತೀರಿಸುತ್ತಿದ್ದಾರೆ. ತಮ್ಮ ಹಾಗೂ ತಮ್ಮ ಪಕ್ಷದ ಮುಖಂಡರ ಬಗ್ಗೆ ಸಾರ್ವಜನಿಕರ ಮುಂದೆ ಅಶ್ಲೀಲವಾಗಿ ಹಾಗೂ ಏಕವಚನದಲ್ಲಿ ಮಾತನಾಡುತ್ತಿರುವುದು ಖಂಡನಾರ್ಹ. ಇಂತಹ ಪ್ರವೃತ್ತಿಯನ್ನು ಶಾಸಕರು ಮುಂದುವರಿಸಿದ್ದೇ ಆದಲ್ಲಿ ಪ್ರತಿಭಟನೆ ಎದುರಿಸಬೇಕಾದೀತು ಎಂದು ಕೆಜೆಪಿಯ ಪರಾಜಿತ ಅಭ್ಯರ್ಥಿ ಮಸಾಲಾ ಜಯರಾಂ ಎಚ್ಚರಿಕೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿಎಸ್ ಪುರ ತಾಲೂಕಿನ ಅಗ್ರಹಾರದ ಸಿದ್ದೇಗೌಡ ಎಂಬುವವರನ್ನು ಶಾಸಕರ ಚಿತಾವಣೆಯಿಂದ ಜೆಡಿಎಸ್‌ನ ಕಾರ್ಯಕರ್ತರು ವಿನಾಕಾರಣ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಸಿದ್ದೇಗೌಡರ ಧ್ವನಿ ಪೆಟ್ಟಿಗೆಗೆ ಪೆಟ್ಟು ಬಿದ್ದಿದ್ದು ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಚುನಾವಣೆಯಲ್ಲಿ ತಮ್ಮ ಪರವಾಗಿ ಕಾರ್ಯ ಮಾಡದ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಮಾಡುತ್ತಿದ್ದಾರೆ. ಇಂತಹ ಪ್ರವೃತ್ತಿ ಮುಂದುವರೆದಲ್ಲಿ ತಾವು ಹಾಗೂ ತಮ್ಮ ಪಕ್ಷದ ಕಾರ್ಯಕರ್ತರು ಕೈ ಕಟ್ಟು ಕುಳಿತುಕೊಳ್ಳುವವರು ಅಲ್ಲ. ತಾವು ಸಹ ತಿರುಗಿ ಬೀಳುವುದಾಗಿ ಮಸಾಲಾ ಜಯರಾಂ ಎಚ್ಚರಿಕೆ ನೀಡಿದ್ದಾರೆ.
ವೈಯಕ್ತಿಕ ತೇಜೋವಧೆ ಸರಿಯಲ್ಲ: ತಮ್ಮನ್ನು ಹಾಗೂ ತಾವು ಮಾಡುತ್ತಿರುವ ಉದ್ಯಮದ ಬಗ್ಗೆ ಶಾಸಕರು ಸಮಾರಂಭಗಳಲ್ಲಿ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ. ನಾನು ಉಪ್ಪಿನ ಕಾಯಿ, ಹಪ್ಪಳ ಮಾಡೇ ಈ ಉದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದೇನೆ. ಅದು ನನ್ನ ವೃತ್ತಿ. ಆದರೆ ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಶಾಸಕರೇ ತಾವು ಆರಂಭದಲ್ಲಿ ಜೀವನ ಆರಂಭಿಸಿದ್ದು, ಸರ್ಕಾರಿ ನೌಕರಿ ಸಿಕ್ಕಿದ ನಂತರ ನೌಕರರ ಸಂಘದ ಹೆಸರಿನಲ್ಲಿ ಏನೇನು ನಡೆದಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರೆ ಮಾನ ಹರಾಜಾಗುತ್ತದೆ. ಈಗಿನವರೆಗಿನ ಅಭಿವೃಧ್ಧಿ ಹೇಗೆ ಸಾಧ್ಯವಾಯಿತು ಎಂಬುದನ್ನು ನೆನೆಸಿಕೊಳ್ಳಿ. ನಾನು ಮೋಸ ಮಾಡಿರುವುದೋ ನೀವು ಮೋಸ ಮಾಡಿರುವುದೋ ಎಂದು ಮಸಾಲಾ ಜಯರಾಂ ಪ್ರಶ್ನಿಸಿದರು. ಇದುವರೆಗೂ ತಾವು ಶಾಸಕರ ಬಗ್ಗೆ ಎಂದೂ ದೂರಿರಲಿಲ್ಲ. ಆದರೆ ತಮ್ಮ ಬಾಯಿ ಚಪಲಕ್ಕಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಸಹಿಸದೇ ಇಂದು ಬೀದಿಗಿಳಿಯಬೇಕಿದೆ ಎಂದರು. ಕೆಜೆಪಿಯ ಕಾರ್ಯಕರ್ತರು ಎದೆಗುಂದಬೇಕಿಲ್ಲ. ತಾವು ಹಗಲಿರುಳೂ ಪಕ್ಷದ ಕಾರ್ಯಕರ್ತರ ಹಿತ ಕಾಯಲು ಸಿಧ್ಧ ಎಂದು ಮಸಾಲಾ ಜಯರಾಂ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೆಜೆಪಿ ಸಂಚಾಲಕ ಕೆಂಪೇಗೌಡ, ಅರಳೀಕೆರೆ ಶಿವಯ್ಯ ಹಾಗೂ ಮಾಳೆ ಕೃಷ್ಣಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ಗೋಪಿನಾಥ್ ಉಪಸ್ಥಿತರಿದ್ದರು.