ಸಹಾಯಧನ ಸರಿಯಾಗಿ ಉಪಯೋಗವಾಗುತ್ತಿಲ್ಲ
ಕ.ಪ್ರ. ವಾರ್ತೆ ಶಿರಾ ಮೇ 28
ಶಿರಾ, ಪಾವಗಡ, ಮಧುಗಿರಿ ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಳೆದ 4-5 ವರ್ಷಗಳಿಂದ ಬರದಿಂದ ತತ್ತರಿಸಿವೆ.
ರೈತನಿಗೆ ನೀಡುತ್ತಿರುವ ರಿಯಾಯಿತಿ ದರದ ಶೇಂಗಾ ಬೀಜವು ಮಾರುಕಟ್ಟೆಯಲ್ಲಿ ಸಿಗದೇ ಇರುವುದು ಒಂದೆಡೆಯಾದರೆ, ಸರ್ಕಾರ ನೀಡುತ್ತಿರುವ ಸಹಾಯಧನ ಸರಿಯಾಗಿ ಉಪಯೋಗವಾಗುತ್ತಿಲ್ಲ ಎಂದು ಶಿರಾ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎನ್.ಸಿ. ಮಂಜುನಾಥ್, ಉಪಾಧ್ಯಕ್ಷ ಕೆ.ಮುಕುಂದಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಇವರು ಈಗಾಗಲೇ ಕೃಷಿ ಇಲಾಖೆ ವತಿಯಿಂದ ಸಹಾಯ ಧನ ನೀಡುತ್ತಿದ್ದು ಪ್ರತಿ 30 ಕೆಜಿ ಶೇಂಗಾ 1400 ರೂ. ಪ್ರತಿ ಕ್ವಿಂಟಾಲ್ಗೆ 4700 ರೂ. ಭರಿಸಬೇಕಾಗಿದೆ. ಇದರಿಂದ ಪ್ರಯೋಜನವಾಗುತ್ತಿಲ್ಲ. ಮಾರುಕಟ್ಟೆ ದರವು 4000-4500 ರೂ. ಇದ್ದು ಸರ್ಕಾರ ನೀಡುವ ಸಹಾಯಧನವು ಯಾವುದೇ ಪ್ರಯೋಜನವಾಗುತ್ತಿಲ್ಲ.
ಸರ್ಕಾರ ಈ ಬಗ್ಗೆ ಯೋಚಿಸಿ ರೈತರಿಗೆ ಮಾರುಕಟ್ಟೆ ದರದಲ್ಲಿ ಶೇಕಡ 50 ರಿಯಾಯಿತಿ ದರದಲ್ಲಿ ನೀಡಬೇಕು ಮತ್ತು 100 ರು. ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜವನ್ನು ವಿತರಿಸಬೇಕೆಂದು ಇವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.