ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಿಂದೂ ಸಮಾಜ ಅಂಧಕಾರದಿಂದ ಬೆಳಕಿನೆಡೆಗೆ ತಂದವ ಬಸವಣ್ಣ

Rashmi Kasaragodu
Updated On : 29 May 2013, 12:08 pm

ಕ.ಪ್ರ. ವಾರ್ತೆ   ಹುಳಿಯಾರು   ಮೇ 28
ಹಿಂದೂ ಸಮಾಜದಲ್ಲಿದ್ದ ಅನೇಕ ಮೂಢನಂಬಿಕೆಗಳ ವಿರುದ್ಧ ದನಿಯೆತ್ತಿ, ಯಾವುದೇ ಜಾತಿಯಲ್ಲಿ ಮೇಲುಕೀಳೆಂಬುದಿಲ್ಲ, ಎಲ್ಲಾ ಕುಲದವರು ಒಂದೇ ಎಂಬ ವಿಶಾಲ ಮನೋಭಾವವನ್ನು ಪ್ರತಿಯೊಬ್ಬ ಮಾನವರು ಹೊಂದಿ ತಮ್ಮ ತಮ್ಮ ಕಾಯದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸಾರುತ್ತಾ ಹಿಂದೂ ಸಮಾಜದಲ್ಲಿನ ಅಂಧಕಾರವನ್ನು ತೊಡೆದು ಬೆಳಕಿನೆಡೆಗೆ ಕೊಂಡೊಯ್ದವರು ಮಹಾನ್ ಮಾನವತಾವಾದಿ ಬಸವಣ್ಣ ಎಂದು  ಕುಪ್ಪೂರು ಗದ್ದಿಗೆ ಸಂಸ್ಥಾನದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಹುಳಿಯಾರು ಹೋಬಳಿ ವೀರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದವತಿಯಿಂದ ಪಟ್ಟಣದ  ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವಿಶ್ವಗುರು  ಶ್ರೀ ಬಸವೇಶ್ವರರ ಜಯಂತ್ಯುತ್ಸವದ ಸಾನಿಧ್ಯವಹಿಸಿದ್ದ ಅವರು  ಆಶೀರ್ವಚನ ನೀಡಿ ಮಾತನಾಡಿದರು. 12ನೇ ಶತಮಾದಲ್ಲಿ ಹಿಂದೂ ಧರ್ಮದಲ್ಲಿ ಹೊಸ ಧರ್ಮಕ್ರಾಂತಿಯನ್ನು ಹುಟ್ಟು ಹಾಕಿದ ಬಸವಣ್ಣನವರ ವಚನಗಳ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು  ಸಮಾಜದ ಬದಲಾವಣೆಗೆ ಅಗತ್ಯವಾಗಿವೆ. ಬ್ರಾಹ್ಮಣ ಕುಲದಿಂದ ಬಂದ ಬಸವಣ್ಣ ವೀರಶೈವ ಕುಲದ ಆಚಾರ ವಿಚಾರಗಳನ್ನು ಒಪ್ಪಿ ಅದೇ ದಾರಿಯಲ್ಲಿ ಮುನ್ನಡೆಯುತ್ತಾ ನೂರಾರು ಶಿವಶರಣರನ್ನು ಒಗ್ಗೂಡಿಸಿದ್ದಲ್ಲದೆ ಕಾಯಕದ ಮಹತ್ವವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟ ಮಹಾನ್ ವ್ಯಕ್ತಿ ಎಂದರು. ವೀರಶೈವ ಎಂದರೆ ಹುಟ್ಟಿನಿಂದಲೇ ವೀರತ್ವವನ್ನು ಹೊಂದಿ ಜನ್ಮತಾಳಿದವನು.ಇಂತಹ ಕುಲದಲ್ಲಿ ಜನಿಸಿದ ನಾವೆಲ್ಲರೂ ಸಂಘಟಿತರಾಗುವ ಮೂಲಕ ಸಮಾಜದಲ್ಲಿ ಏಳ್ಗೆಯನ್ನು ಹೊಂದಬೇಕು ಎಂದರು. ಮನಸ್ಸು ಶುದ್ಧಿಯಿಂದಿದ್ದರೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಆ ನಿಟ್ಟಿನಲ್ಲಿ ಸದಾಕಾಲ ಕೂಡಲಸಂಗಮನ ನೆನೆಯುವಂತೆ ತಿಳಿಸಿದರು.
ಮೆರವಣಿಗೆ: ಸಂಜೆ  ಅಷ್ಠಮಂಡಲ ಮಂಟಪದಲ್ಲಿ ಬಸವೇಶ್ವರರ ಭಾವಚಿತ್ರದೊಂದಿಗೆ  ಪ್ರಾರಂಭವಾದ ಮೆರವಣಿಗೆಯಲ್ಲಿ  ರಾಜ್ಯ ಪ್ರಶಸ್ತಿ ವಿಜೇತ ಬೆಳ್ತಂಗಡಿ ಗಿರಿಧರ ಶೆಟ್ಟಿ ಬೊಂಬೆ ಬಳಗದಿಂದ ಹಾಲಕ್ಕಿ ಕುಣಿತ, ನಾದಸ್ವರ, ಕಡೂರಿನ ಬಸವಶ್ರೀ ಮಹಿಳಾ ತಂಡದವರಿಂದ ವೀರಗಾಸೆ, ಚಿಕ್ಕನಹಳ್ಳಿ  ವಿರಭದ್ರೇಶ್ವರ ಜಾನಪದ ಕಲಾವಿದರ ಸಂಘದಿಂದ ವೀರಭದ್ರನ ಕುಣಿತ, ಕೆಂಕೆರೆ ಬಸವಕೇಂದ್ರ ಹಾಗೂ ಅಕ್ಕಮಹಾದೇವಿ ಮಹಿಳಾ ಸಂಘದಿಂದ ವಚನ ಗಾಯನ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳಿಂದ ವೈವಿಧ್ಯಮಯ ಪ್ರದರ್ಶನ ಹಾಗೂ  ಮದ್ದುಗುಂಡಿನ ಪ್ರದರ್ಶನ ಉತ್ಸವದುದ್ದಕ್ಕೂ ನಡೆದು ನಂತರ ಅನ್ನಸಂತರ್ಪಣೆ ಜರುಗಿತು. ಜಯಂತ್ಯುತ್ಸವನ್ನು ಜಿಲ್ಲಾ ಬಸವ ಸೇನೆಯ ಜಿಲ್ಲಾಧ್ಯಕ್ಷ ಗಂಗರಾಜು ಉದ್ಘಾಟಿಸಿದರು. ಕೆಂಕೆರೆ ಬಸವಕೇಂದ್ರದ ಗಂಗಾಧರಯ್ಯ ಪ್ರಾಸ್ತಾವಿಕ ನುಡಿ ನುಡಿದರು. ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ. ನೀಲಕಂಠಯ್ಯ ಅಧ್ಯಕ್ಷತೆವಹಿಸಿದ್ದು,  ಕಾರ್ಯದರ್ಶಿ ಗಂಗಾಧರಯ್ಯ, ಜಿಲ್ಲಾ ಎಪಿಎಂಸಿ ಉಪಾಧ್ಯಕ್ಷ ಶಿವಕುಮಾರ್, ಪತ್ರಕರ್ತ ಸತೀಶ್ ಉಪಸ್ಥಿತರಿದ್ದ ಧಾರ್ಮಿಕ ಸಮಾರಂಭವನ್ನು ಡಿ.ರಮೇಶ್ ನಿರೂಪಿಸಿ, ಉಮೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement