ಅಭ್ಯರ್ಥಿಯ ಗೈರು ಹಾಜರಿ: ಪೂರ್ಣಗೊಳ್ಳದ ಕೈನ ಆತ್ಮಾವಲೋಕನ ಸಭೆ
ಕ.ಪ್ರ. ವಾರ್ತೆ ತುರುವೇಕೆರೆ ಮೇ 29
ಕಾಂಗ್ರೆಸ್ನ ಆತ್ಮಾವಲೋಕನ ಸಭೆಗೆ ಈ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೇ ಗೈರು. ಬಂದಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ವಿಫಲ. ಈ ಕ್ಷೇತ್ರದ ಸೋಲಿಗೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಅಧ್ಯಕ್ಷರೇ ಕಾರಣ ಎಂದ ಕಾರ್ಯಕರ್ತರು. ಇದು ಪಟ್ಟಣದ ಬೇಟೇರಾಯಸ್ವಾಮಿ ದೇವಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ನ ಆತ್ಮಾವಲೋಕನ ಸಭೆಯ ಹೈಲೈಟ್ಸ್.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಬೇಕೆನ್ನುವ ಉದ್ದೇಶದಿಂದ ಕೆಪಿಸಿಸಿಯ ಯುವ ಕಾರ್ಯದರ್ಶಿ ಗೀತಾ ರಾಜಣ್ಣನವರಿಗೆ ಟಿಕೆಟ್ ನೀಡಲಾಗಿತ್ತು. ಟಿಕೆಟ್ ಘೋಷಣೆಯಾದಂದಿನಿಂದಲೂ ಅಭ್ಯರ್ಥಿಯ ಬಗ್ಗೆ ಅಸಮಾಧಾನ ಉಂಟಾಗಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವಾಗಿತ್ತು ಎಂಬುದು ಇತಿಹಾಸ. ಪರಿಣಾಮ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಏಳುವರೆ ಸಾವಿರದಷ್ಟು ಮತ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ಆತ್ಮಾವಲೋಕನ ಸಭೆ ನಡೆಸುವುದು ಮತ್ತು ಖಾಲಿಯಾಗಿರುವ ಸಿಎಸ್ ಪುರ ಬ್ಲಾಕ್ನ ಅಧ್ಯಕ್ಷ ಸ್ಥಾನವನ್ನು ಸೂಕ್ತವಾದವರಿಗೆ ನೀಡಬೇಕು ಎಂಬ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಸಭೆ ಪ್ರಾರಂಭದಿಂದ ಅಂತ್ಯದವರೆಗೂ ಗೊಂದಲದ ಗೂಡಾಗೇ ಇತ್ತು. ಹಲವಾರು ಕಾರ್ಯಕರ್ತರು ಪಕ್ಷ ಯಾರಿಗೇ ಟಿಕೆಟ್ ನೀಡಲಿ ಅವರ ಪರವಾಗಿ ಹೋರಾಟ ಮಾಡದೇ ಹಲವಾರು ನಾಯಕರು, ಮುಖಂಡರು ಪಕ್ಷದ ವಿರುದ್ಧವಾಗೇ ಕೆಲಸ ಮಾಡಿದರು ಎಂದು ದೂರಿದರು. ಕಾಂಗ್ರೆಸ್ನ ರಾಜ್ಯ ಅಧ್ಯಕ್ಷರು ಸ್ಥಳೀಯ ಶಾಸಕರ ಚಿತಾವಣೆಯಿಂದ ಕ್ಷೇತ್ರಕ್ಕೆ ಪರಿಚಯವಿಲ್ಲದ ಹಾಗೂ ಸೇವೆ ಸಲ್ಲಿಸದ ಮಹಿಳೆಯೋರ್ವರಿಗೆ ಟಿಕೆಟ್ ನೀಡಿದ್ದು ಸೋಲಿಗೆ ಕಾರಣ. ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಗೀತಾ ರಾಜಣ್ಣನವರೇ ಈ ಸೋಲಿಗೆ ಕಾರಣ ಎಂದು ಕೆಲವು ಕಾರ್ಯಕರ್ತರು ಹೇಳಿದರು.
ವ್ಯಂಗ್ಯ: ಕ್ಷೇತ್ರದಲ್ಲಿ ಕಾಂಗ್ರೆಸ್ನ ಕಾರ್ಯಕರ್ತರು ಸಾಕಷ್ಟು ಇದ್ದರೂ ಸಹ ಮುಖಂಡರು ಕೆಜೆಪಿಯೊಂದಿಗೆ ಕೈ ಜೋಡಿಸಿದರು ಎಂದು ಹಲವಾರು ಕಾರ್ಯಕರ್ತರು ಸಿಡಿಮಿಡಿಗೊಂಡರು. ಹಲವಾರು ಮುಖಂಡರು ಬಹಿರಂಗವಾಗೇ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದರು. ಇಷ್ಟಾದ ಮೇಲೂ ಏಕೆ ಆತ್ಮಾವಲೋಕನ ಸಭೆ ಎಂದು ವ್ಯಂಗ್ಯವಾಡಿದರು. ಜೆಡಿಎಸ್ ಹಾಗೂ ಕೆಜೆಪಿಗೆ ಸಹಕಾರ ಮಾಡಿದ ಮುಖಂಡರುಗಳು ಇಲ್ಲೇ ಇದ್ದಾರೆ. ಅವರುಗಳಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದರು. ಟಿಕೆಟ್ ನೀಡುವ ದಿನದಿಂದಲೂ ಅಂತಿಮ ದಿನದವರೆಗೂ ಕಾಂಗ್ರೆಸ್ನ ರಾಜ್ಯ, ಜಿಲ್ಲೆ ಹಾಗೂ ಕ್ಷೇತ್ರದ ಕಾಂಗ್ರೆಸ್ ನಾಯಕರುಗಳು ಕ್ಷೇತ್ರವನ್ನು ಗಂಭೀರವಾಗೇ ತೆಗೆದುಕೊಳ್ಳಲಿಲ್ಲ. ಯಾವುದೇ ಸೂಕ್ತ ಸಭೆ ಸಮಾರಂಭಗಳನ್ನು ಮಾಡಲೇ ಇಲ್ಲ. ಕೇವಲ ಕಾಟಾಚಾರವಾಗಿ ಚುನಾವಣೆಯನ್ನು ಎದುರಿಸಲಾದ ಪರಿಣಾಮವೇ ಇಂದು ಠೇವಣಿ ತೆಗೆದುಕೊಳ್ಳಲೂ ಆಗದ ಸ್ಥಿತಿ ಬಂತು. ಇದಕ್ಕೆ ಯಾವ ಪ್ರಾಮಾಣಿಕ ಕಾರ್ಯಕರ್ತರೂ ಕಾರಣರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಉಪಾಧ್ಯಕ್ಷ ಚೌದ್ರಿ ರಂಗಪ್ಪ, ಎಂ.ವಿಶ್ವೇಶ್ವರಯ್ಯ, ಎಂ.ಎಲ್. ಗೋವಿಂದರಾಜ್ ಗೌಡ, ಬಿ.ಎಸ್.ವಸಂತಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಉಗ್ರೇಗೌಡ, ಟಿ.ಎಸ್.ದಾನಿಗೌಡ, ಮಾಜಿ ಜಿ.ಪಂ.ಸದಸ್ಯರಾದ ಕೃಷ್ಣೇಗೌಡ, ಎನ್.ಆರ್.ಜಯರಾಂ, ಕೆ.ಬಿ.ಹನುಮಂತಯ್ಯ, ಟಿ.ಎಂ.ಗೌಡ, ಕೆ.ಮಂಜು, ಮಾಚೇನಹಳ್ಳಿ ವಿಶ್ವನಾಥ್, ಗುಡ್ಡೇನಹಳ್ಳಿ ನಂಜುಂಡಪ್ಪ ಮೊದಲಾದ ಮುಖಂಡರು ಹಾಜರಿದ್ದರು. ಕೆಪಿಸಿಸಿಯ ಸದಸ್ಯ ಹಾಗೂ ಮಾಜಿ ಶಾಸಕ ಎಸ್.ರುದ್ರಪ್ಪ, ಹಿರಿಯ ಮುಖಂಡ ದಂಡಿನ ಶಿವರ ಗಂಗಾಧರಗೌಡ ಸೇರಿದಂತೆ ಹಲವಾರು ಹಿರಿಯ ಮುಖಂಡರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಸಿಎಸ್ ಪುರ ಹೋಬಳಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತುರುವೇಕೆರೆ ತಾಲೂಕಿನ ಹಲವಾರು ಹಿರಿಯ ಮುಖಂಡರ ಹೆಸರನ್ನು ಪ್ರಸ್ಥಾಪಿಸಿದರು. ಆದರೆ ಸಿಎಸ್ ಪುರ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕ್ಷೇತ್ರಕ್ಕೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಈ ನಡುವೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲೇ ಇಲ್ಲ. ಸಭೆ ಯಾವುದೇ ಸ್ಪಷ್ಟ ನಿರ್ಣಯ ಕೈಗೊಳ್ಳದೇ ಮುಂದೂಡಲಾಯಿತು.