ಕಲ್ಪಸಿರಿ ತೆಂಗಿನ ಮರ ಹತ್ತುವವರ ಬಳಗ ಸ್ಥಾಪನೆ
ತಿಪಟೂರು: ತಾಲೂಕಿನ ಬಿದರಮ್ಮನಗುಡಿ ಕಾವಲಿನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ರಾಯಸಂದ್ರ ಗ್ರಾಮದಲ್ಲಿ ಕಲ್ಪಸಿರಿ ತೆಂಗಿನ ಮರ ಹತ್ತುವವರ ಬಳಗ ಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಳಗವನ್ನು ಕೃಷಿ ವಿಜ್ಞಾನ ಕೇಂದ್ರದ ಬಿದರಮ್ಮನಗುಡಿ ಕಾವಲು ತಿಪಟೂರು, ಇಲ್ಲಿನ ತೆಂಗು ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರಿಂದ ಪ್ರಾಯೋಜಿತ ಒಂದು ವಾರದ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ 12 ರೈತರು ಸ್ಥಾಪಿಸಿದ್ದು, ಕೇಂದ್ರದಿಂದ ಒಂದು ಬಳಗ ಕಟ್ಟಲು ಎಲ್ಲಾ ನೆರವನ್ನು ನೀಡಲಾಗಿತ್ತು.
ಪ್ರಕೃತಿ ಉತ್ಪಾದಕ ಸಂಘ ಹಾಗೂ ಕಲ್ಪಸಿರಿ ತೆಂಗಿನ ಮರ ಹತ್ತುವವರ ಬಳಗದ ಅಧ್ಯಕ್ಷ ಆರ್.ಎಸ್. ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ತುರುವೇಕೆರೆ ತಾಲೂಕಿನ ತೆಂಗು ಬೆಳೆಗಾರರ ಸಂಘದ ರಾಜ್ಯ ಸಂಚಾಲಕರು ಹಾಗೂ ಕಾರ್ಯದರ್ಶಿ ಎಂ.ಬಿ. ಸಿದ್ದಬಸವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ತೆಂಗು ಬೆಳೆಗಾರರ ಸಂಘದ ಪ್ರಾಮುಖ್ಯತೆಯನ್ನು ವಿವರಿಸಿದರು. ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಂಯೋಜಕ ಡಾ.ಜಿ.ಎಂ. ಸುಜಿತ್ ಭಾಗವಹಿಸಿ ಕೇಂದ್ರದಿಂದ ಸಂಘದ ಸದಸ್ಯರು ತರಬೇತಿ ಪಡೆದು ಒಂದು ಬಳಗವನ್ನು ಸ್ಥಾಪಿಸುತ್ತಿರುವುದಕ್ಕೆ ಅಭಿನಂದನೆ ತಿಳಿಸಿ, ಈ ಬಳಗವು ಇನ್ನೂ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅನೇಕ ಹಳ್ಳಿಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಹಾಗೂ ಮರ ಹತ್ತುವ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಜಿಲ್ಲೆಯಾದ್ಯಂತ ನೀಗಿಸಬೇಕೆಂದು ಕರೆ ನೀಡಿದರು.
'ಯಾರೇ ವಿರೋಧಿಸಿದರೂ ಸಾಹಿತ್ಯ ಸಮ್ಮೇಳನ ನಿಲ್ಲೋದಿಲ್ಲ'
ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ಜೂನ್ 28 ರಿಂದ ನಡೆಯಲಿರುವ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾರು ಏನೇ ವಿರೋಧ ವ್ಯಕ್ತಪಡಿಸಿದರೂ ಸಮ್ಮೇಳನ ಮಾತ್ರ ನಿಲ್ಲುವುದಿಲ್ಲ ಎಂದು ಸಮ್ಮೇಳನಾಧ್ಯಕ್ಷ ಮರಿದೇವರು ಅವರು ಸ್ಪಷ್ಟಪಡಿಸಿದ್ದಾರೆ. ಒಬ್ಬ ಲಿಂಗಾಯಿತನಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದು ಇವರುಗಳಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಜಾತಿವಾದ ಮಾಡಿ ನಾನೇ ಗೆಲ್ಲುತ್ತೇನೆಂಬ ಮೂರ್ಖತನ ತೋರಿಸುತ್ತಿದ್ದಾರೆ. ಕೆ.ಬಿ.ಸಿದ್ದಯ್ಯ ಎಂಬುವವರು ಅಧ್ಯಕ್ಷರಾಗಿದ್ದರೆ ಯಾರೂ ತಕರಾತು ತೆಗೆಯುತ್ತಿರಲಿಲ್ಲ ಎಂದರು. ಹಾಗೆಯೇ ಯಾರು ಪ್ರತಿಭಟನೆ ನಡೆಸಿದರೂ, ಧಿಕ್ಕಾರ ಕೂಗಿದರೂ, ಕಪ್ಪುಭಾವುಟ ಪ್ರದರ್ಶನ ಮಾಡಿದರೂ ಸಹ ಸಾಹಿತ್ಯ ಸಮ್ಮೇಳನ ನಿಲ್ಲುವುದಿಲ್ಲ. ಹಾಗೇನಾದರೂ ಕೃತ್ಯಗಳಲ್ಲಿ ತೊಡಗಿದರೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಮದುವೆಗೆ ಹೋಗಿ
ಬರುವಾಗ ಅಪಘಾತ; ರೈತರಿಬ್ಬರ ಸಾವು
ರಾಮನಾಥಪುರ: ಸ್ನೇಹಿತರ ವಿವಾಹಕ್ಕೆ ಹೋಗಿ ಹಿಂತಿರುಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಇಬ್ಬರು ರೈತರು ಮೃತಪಟ್ಟಿರುವ ದುರ್ಘಟನೆ ಕೊಣನೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ರುದ್ರಪಟ್ಟಣ ನಿವಾಸಿಗಳಾದ ರಂಗಸ್ವಾಮಿ (40) ಮತ್ತು ವೆಂಕಟೇಶ್ (35) ಎಂಬವರೇ ಮೃತಪಟ್ಟವರು.
ಕೃಷಿಕರಾದ ಅವರಿಬ್ಬರು ಬೈಕ್ನಲ್ಲಿ ಕುಶಾಲನಗರದಲ್ಲಿ ನಡೆದ ವಿವಾಹ ಮುಗಿಸಿಕೊಂಡು ಬೈಕ್ನಲ್ಲಿ ಮಧ್ಯಾಹ್ನ 2 ರಲ್ಲಿ ಕೊಣನೂರು ಬಸವೇಶ್ವರ ದೇವಾಲಯದ ಸಮೀಪ ಬರುತ್ತಿದ್ದರು.
ಆಗ ಎದುರಿನಿಂದ ರಾಮನಾಥಪುರ ಕಡೆಯಿಂದ ಬಂದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಣನೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂವರು ಹುಡುಗರು ನೀರುಪಾಲು
ಅರಕಲಗೂಡು: ಮೂವರು ಹುಡುಗರು ನೀರು ಪಾಲಾದ ದುರ್ಘಟನೆ ತಾಲೂಕಿನ ದೇವಿಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ದೊಡ್ಡಮಗ್ಗೆ ಹೋಬಳಿ ದೇವೀಪುರ ಗ್ರಾಮದ ಕೆರೆಯ ನೀರಿನಲ್ಲಿ ಆಡಲೆಂದು ತೆರಳಿದ್ದ ಐವರು ಹುಡುಗರ ಪೈಕಿ ಮೂವರು ಹುಡುಗರು ವಿಧಿಯಾಟಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಬುಧವಾರ ಬೆಳಗ್ಗೆ ಹುಡುಗರ ಮನೆಯವರು ಅರಕಲಗೂಡಿಗೆ ಮದುವೆಗೆಂದು ತೆರಳಿದ್ದ ವೇಳೆ ಸುಮಾರು 10 ಗಂಟೆ ವೇಳೆಯಲ್ಲಿ ಹೊಸಕೆರೆಯ ನೀರಿನಲ್ಲಿ ಆಟವಾಡಲು ತೆರಳಿದ ಹುಡುಗರು ಅಲ್ಲಿಯೇ ಇದ್ದ ಬಾಳೆ ದಿಂಡುಗಳನ್ನು ಕಟ್ಟಿಕೊಂಡು ತೆಪ್ಪ ತಯಾರಿಸಿ ಒಂದು ದಡದಿಂದ ಮತ್ತೊಂದು ದಡಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಆದರೆ ಇಬ್ಬರು ಬಾಲಕರು ಮಾತ್ರ ಅದೃಷ್ಟ ವಶಾತ್ ಪಾರಾಗಿ ದಡ ಸೇರಿದ್ದಾರೆ.
ಗ್ರಾಮದ ಸುಮಾರು 17 ವರ್ಷದ ಆಸುಪಾಸಿನ ಮಂಜು, ರವಿ, ಪುನಿತ್ ಮೃತಪಟ್ಟ ದುರ್ದೈವಿಗಳು. ಬದುಕುಳಿದ ಮಂಜುನಾಥ ಮತ್ತು ನಾಗೇಶ ಕೂಡಲೇ ತೆರಳಿ ಗ್ರಾಮಸ್ಥರಿಗೆ ತಿಳಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆಕಸ್ಮಿಕ ಬೆಂಕಿಗೆ ಎರಡು ಗುಡಿಸಲು, 6 ಕುರಿ ಬಲಿ
ಗುಲ್ಬರ್ಗ: ಆಳಂದ ತಾಲೂಕಿನ ಹಡಲಗಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ 2 ಗುಡಿಸಲು ಭಸ್ಮವಾದರೆ, ಲಾಡ ಮುಗಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ 6 ಕುರಿ, 1 ಆಕಳು ಕರು ಬಲಿಯಾದ ಘಟನೆ ನಡೆದಿವೆ.
ಆಳಂದ ತಾಲೂಕಿನ ಹಡಲಗಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ 2 ಗುಡಿಸಲುಗಳಿಗೆ ಬೆಂಕಿ ಹತ್ತಿದ್ದು, 70 ಸಾವಿರ ಮೌಲ್ಯದ ಆಸ್ತಿ ನಾಶವಾಗಿದೆ. ಗ್ರಾಮದ ಹೊರವಲಯದಲ್ಲಿರುವ ಬಾಬುರಾವ್ ಸರಸಂಬಿ ಮತ್ತು ಮಲ್ಲಿನಾಥ ಒಗ್ಗಾಲಿ ಅವರಿಗೆ ಸೇರಿದ 2 ಗುಡಿಸಲುಗಳು ಭಸ್ಮವಾಗಿವೆ.
ಗುಡಿಸಲಲ್ಲಿ ಕಟ್ಟಲಾದ ಎಮ್ಮೆ ಕರು ಸತ್ತಿದ್ದು, ಕಟ್ಟಿಗೆ, ಪತ್ರಾ, ಮೇವು, ಕೃಷಿ ಸಾಮಗ್ರಿಗಳು ಬೆಂಕಿಯಲ್ಲಿ ಬೆಂದಿವೆ. ಕಂದಾಯ ನಿರೀಕ್ಷಕ ಸಿದ್ದಮಲ್ಲಪ್ಪ ಅಷ್ಠಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಡ ಮುಗಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಗುಡುಸಲಿಗೆ ತಗುಲಿ 6 ಕುರಿ, 1 ಆಕಳು ಕರುಗಳು ಸಜೀವ ದಹನವಾಗಿವೆ. ಶರಣಪ್ಪ ಮಾವುರಕರ್ ಎಂಬವರಿಗೆ ಸೇರಿದ ಗುಡಿಸಲಾಗಿದ್ದು, ಬೆಂಕಿಯಿಂದ 20 ಪತ್ರಾಗಳು, ಎತ್ತಿನ ಗಾಡಿ, ಕೃಷಿ ಉಪಕರಣಗಳು ದಿನ ಬಳಕೆ ಸಾಮಾನುಗಳು ಸೇರಿದಂತೆ 50 ಸಾವಿರ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಸೂರ್ಯಕಾಂತ ಭೇಟಿ ನೀಡಿ ಪರಿಶೀಸಿದರು. ಈ ಕುರಿತು ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರುಣನ ಆರ್ಭಟಕ್ಕೆ ಒಬ್ಬ ಬಲಿ
ಬೆಂಗಳೂರು: ರಾಜ್ಯದ ಎಲ್ಲೆಡೆ ಬುಧವಾರ ವರುಣನ ಆರ್ಭಟ ಕಂಡು ಬಾರದಿದ್ದರೂ ಅಲ್ಲಲ್ಲಿ ಮಳೆಯಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ಸಿಡಿಲು ಬಡಿದು ಯಾದಗಿರಿ ತಾಲೂಕಿನ ಕೊಟಗೇರಾದಲ್ಲಿ ಮೃತಪಟ್ಟಿದ್ದಾನೆ.
ಶ್ರೀಮಂತ (55) ಮೃತಪಟ್ಟವನು. ಈ ಘಟನೆಗೆ ಸಂಬಂಧಿಸಿದಂತೆ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ನಗರ ಮತ್ತು ಜಿಲ್ಲೆಯ ಕೆಲವೆಡೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ವಾತಾವರಣದಲ್ಲಿ ತಂಪು ತಂದಿತು. ದೇವದುರ್ಗದಲ್ಲಿ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಕೆಲ ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಬಿಸಿಲ ಧಗೆ ತಣಿಸಿದ ವರುಣಾ: ಕಳೆದ ಒಂದು ತಿಂಗಳಿನಿಂದ ಬಿಸಿಲಿನ ಝಳಕ್ಕೆ ತತ್ತರಿಸಿದ ಬೀದರ್ನಲ್ಲೂ ಸ್ವಲ್ಪ ಮಳೆಯಾಗಿ ತಂಪು ವಾತಾವರಣ ನಿರ್ಮಾಣವಾಯಿತು. ಅನೇಕ ಸಣ್ಣಪುಟ್ಟ ಮನೆಗಳ ಮೇಲಿದ್ದ ತಗಡಿನ ಟನ್ಗಳು, ಕೆಲವರ ನೀರಿನ ಸಿಂಟೆಕ್ಸ್ ಟ್ಯಾಂಕ್ಗಳು ಉರುಳಿ ಬಿದ್ದರೆ, ಬೀದರ್ನ ನೆಹರು ಕ್ರೀಡಾಂಗಣದಲ್ಲಿ ದೊಡ್ಡದಾದ ಮರವೊಂದು ಅಲ್ಲಿದ್ದ ಅಂಗಡಿಗಳ ಮೇಲೆ ಬಿದ್ದಿದೆ. ಇದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಎರಡು ಬಾರಿ ಅತ್ಯಾಚಾರ: ಗರ್ಭಿಣಿ ದೂರು
ಮಂಗಳೂರು: ಎರಡು ಬಾರಿ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿದ ಯುವಕನ ವಿರುದ್ಧ ಗರ್ಭಿಣಿಯಾದ ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಲ್ಕಿಯ ಕರ್ನಿರೆಯ 28 ವರ್ಷದ ಯುವತಿ ಅಂಗಡಿಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಸಿಕ್ಕಿದ ಸುಧಾಕರ ಎಂಬಾತ ದಾರಿಗೆ ಅಡ್ಡಗಟ್ಟಿ ಕಾಡಿಗೆ ಕರೆದೊಯ್ದು ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ವಾರದ ಬಳಿಕ ಸುಧಾಕರ ಅದೇ ರೀತಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಮನೆಯವರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಸಿದ್ದ. 5 ತಿಂಗಳ ಗರ್ಭಿಣಿಯಾಗಿರುವ ಯುವತಿ ಮಹಿಳಾ ಪೊಲೀಸರ ಬಳಿ ಸುಧಾಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.