ಶಿರಾ ತಾಲೂಕಿನಲ್ಲಿ ಕೈಕೊಟ್ಟ ವಾಡಿಕೆ ಮಳೆ
ಕ.ಪ್ರ. ವಾರ್ತೆ ಶಿರಾ ಮೇ 29
ತಾಲೂಕಿನಲ್ಲಿ 2013ರ ಮಾಹೆವರೆಗೆ ಬರಬೇಕಾದ ವಾಡಿಕೆ ಮಳೆ 98.6 ಮಿ.ಮಿ. ಆದರೆ ಮೇ 21 ರವರೆಗೆ ಬಂದಿರುವ ಮಳೆ ಕೇವಲ 61.91 ಮಿ.ಮೀ. ಆಗಿದ್ದು ಶೇ. 36 ರಷ್ಟು ಕಡಿಮೆ ಮಳೆ ಬಂದಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೆಶಕರು ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಇದೇ ಮಾಹೆಯ ಅಂತ್ಯಕ್ಕೆ ಬಂದಿರುವ ಮಳೆ 139.3 ಮಿ.ಮೀ. ಈ ವರ್ಷ ತಾಲೂಕಿನಲ್ಲಿ ಮಳೆ ತಡವಾಗಿ ಪ್ರಾರಂಭವಾಗಿದ್ದು ಮೊದಲ ಮಳೆ ಮೇ 9 ರಿಂದ ಪ್ರಾರಂಭವಾಗಿ, ಮೇ 19, 21 ಮತ್ತು 28 ರಂದು ತಾಲೂಕಿನಾದ್ಯಂತ ಸಾಧಾರಣವಾಗಿ ಮಳೆಯಾಗಿದೆ. ರೈತರು ಈ ಮಳೆಯ ತೇವಾಂಶವನ್ನು ಉಪಯೋಗಿಸಿಕೊಂಡು ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ತಿಳಿಸಿದೆ.
ಬಿತ್ತನೆಗೆ ಬೇಕಾದ ನೆಲಗಡಲೆ, ತೊಗರಿ, ರಾಗಿ, ಬತ್ತ, ಸೂರ್ಯಕಾಂತಿ ಮತ್ತು ಹೈಬ್ರಿಡ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಈಗಾಗಲೇ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಬಿತ್ತನೆ ಬೀಜ ಬೇಕಾದ ರೈತರು ಈಗಾಗಲೇ ನಿಗದಿಪಡಿಸಿರುವ ಮಾರಾಟ ಕೇಂದ್ರಗಳಲ್ಲಿ ಹಾಗೂ ಹೆಚ್ಚುವರಿ ಮಾರಾಟ ಕೇಂದ್ರಗಳಾದ ಹುಲಿಕುಂಟೆ ಮತ್ತು ಪಟ್ಟನಾಯಕನಹಳ್ಳಿಗಳಲ್ಲಿ ಈ ವ್ಯಾಪ್ತಿಯ ರೈತರು ಕೃಷಿ ಇಲಾಖೆಗೆ ತಮ್ಮ ಜಮೀನಿನ ಪಹಣಿ ಮತ್ತು ಗುರುತಿನ ಚೀಟಿ ನೀಡಿ ಪರ್ಮಿಟ್ ಪಡೆದು ಹೋಬಳಿಗೆ ಸಂಬಂಧಪಟ್ಟ ಮಾರಾಟ ಕೇಂದ್ರಗಳಲ್ಲಿ ರೈತರ ಭಾಗದ ಹಣ ನೀಡಿ ಬಿತ್ತನೆ ಬೀಜ ಪಡೆಯಬಹುದು. ಅಲ್ಲದೆ ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್, ಬೋರಾನ್ ಮತ್ತು ಜಿಪ್ಸಂಗಳನ್ನು ಸಹ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು ಬಿತ್ತನೆ ಬೀಜಗಳ ಜೊತೆಗೆ ಪಡೆಯಬಹುದಾಗಿದೆ. ಹಾಗೂ ಬಿತ್ತನೆಗೆ ಬೇಕಾದ ರಸಗೊಬ್ಬರಗಳು ಸಹಕಾರಿ ಸಂಘಗಳು ಮತ್ತು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ದಾಸ್ತಾನು ಇದ್ದು ಬಿತ್ತನೆಗೆ ಮುಂಚಿತವಾಗಿ ರೈತರು ಅದನ್ನು ಕೊಂಡು ದಾಸ್ತಾನು ಮಾಡಿಕೊಳ್ಳಲು ಸಹ ರೈತ ಬಾಂಧವರಿಗೆ ಸಹಾಯಕ ಕೃಷಿ ನಿರ್ದೆಶಕರು ತಿಳಿಸಿದ್ದಾರೆ.