ಸತ್ಯಗುಣದ ಕವಿಯಿಂದಷ್ಟೆ ವಿಶ್ವ ಕಲ್ಯಾಣ ಸಾಧ್ಯ
ಕ.ಪ್ರ. ವಾರ್ತೆ ತುಮಕೂರು ಮೇ 29
ತಾಮಸ ಮತ್ತು ರಾಜಸ ಗುಣಗಳಿಗಿಂತ ಸತ್ಯಗುಣದ ಕವಿಯಿಂದಷ್ಟೆ ವಿಶ್ವ ಕಲ್ಯಾಣ ಸಾಧ್ಯ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ನುಡಿದರು.
ನಗರದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಜರುಗಿದ ಬದುಕು-ಬರೆಹ, ಸಾಧನೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಯಾದವನು ಜ್ಞಾನ-ವಿಜ್ಞಾನಗಳೊಂದಿಗೆ ಸಾತ್ವಿಕ ಗುಣಧರ್ಮಗಳನ್ನು ಹೊಂದಿದಾಗಷ್ಟೆ ವಿಶ್ವಮಾನವ ತತ್ವ ಉನ್ನತ ಸ್ತರವೇರುವುದು, ವಿಶ್ವ ಭ್ರಾತೃತ್ವ ಮೊಳೆಯುವುದು ಎಂದರು.
ತಾಮಸ ಮತ್ತು ರಾಜಸ ಗುಣಗಳು ತಾತ್ಕಾಲಿಕ ಸುಖ ನೀಡಿದರೆ ಸಾತ್ಮಿಕ ಗುಣವು ಶಾಶ್ವತ ಪರಮ ಸುಖ ನೀಡಬಲ್ಲದು. 74 ವಸಂತಗಳ ಕಾಲ ಶೈಕ್ಷಣಿಕ ಸೇವೆಯೊಂದಿಗೆ ಸಾಹಿತ್ಯ ಸೇವೆ ಮಾಡಿರುವ
ತಾ.ಲ. ರಂಗನಾಥಶೆಟ್ಟರು ಸಾತ್ವಿಕ ಗುಣಗಳ ಸಿರಿವಂತ ಕವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ತಾ.ಲ.ರಂ ಅವರ ನೂತನ ಸಮಾಜ ನಾಟಕ ಕೃತಿಯನ್ನು ಖ್ಯಾತ ಉದ್ಯಮಿ ಸಿ.ಎಸ್. ಸೋಮೇಶ್ವರಗುಪ್ತ ಲೋಕಾರ್ಪಣೆಗೊಳಿಸಿದಲ್ಲದೆ ದೇಶಪ್ರೇಮದ ಬೀಜವನ್ನು ಜನಮಾನಸದಲ್ಲಿ ಭಿತ್ತಿ ಕಾಲಧರ್ಮಕ್ಕೆ ಸಕಾಲದಲ್ಲಿ ಸ್ಪಂದಿಸುವುಂತೆ ಕರೆ ನೀಡಿದರು.
ವಿಚಾರ ಸಂಕಿರಣದಲ್ಲಿ ಮಾತನಾಡಿದ ಖ್ಯಾತ ಲೇಖಕ ಅನುವಾದಕ ಎಂ.ವಿ. ನಾಗರಾಜರಾವ್ ತಾ.ಲ.ರಂ ಹಿಂದಿ ಕ್ಷೇತ್ರಕ್ಕೆ ನೀಡಿದ ಕಾಣಿಕೆಯನ್ನೂ ಅವರ ಅನುವಾದ ಕಾರ್ಯವನ್ನು ಬಣ್ಣಿಸಿ ಲೇಖಕರು ಸದ್ದುಗಲ್ಲದ ವಿಲ್ಲದೆ ಕೆಲಸ ಮಾಡಬೇಕು ಎಂದರು.
ಪದ್ಯ ಕಾಣ್ಕೆ ಕುರಿತು ಉಪನ್ಯಾಸ ನೀಡಿದ ಲೇಖಕಿ ಶೈಲ ರಂಗನಾಥ್ ತಾಲರಂ ಭಾವಜೀವಿಗಳು. ರಾಮರಾಜ್ಯದ ಹೊಂಗನಸನ್ನು ನನಸಾಗಿಸುವ ಹಂಬಲ ಹೊತ್ತು ತಮ್ಮ ಮನೋಧರ್ಮವನ್ನು ಕಾವ್ಯಧರ್ಮದ ಮೂಲಕ ಅಭಿವ್ಯಕ್ತಿಸಿದ ಸಹೃದಯವಂತರು ಎಂದರು.
ಕವಿ ವಿ.ಪಿ. ಕೃಷ್ಣಮೂರ್ತಿ ಬಾಲ್ಯ-ಬದುಕಿನ ಸಹಜ ಚಿತ್ರಣ ನೀಡಿ ತಾಲರಂ ತ್ರಿಭಾಷ ಕವಿ. ಹಾಗೆಯೇ ಅವರು ಆದರ್ಶ ವ್ಯಕ್ತಿ ಎಂದರು. ಕವಿತಾ ಅರುಣ್ ನನ್ನ ಮಾವಂದಿರು. ಕಾಯಕಯೋಗಿ, ಸಾಹಿತ್ಯ ತಪಸ್ವಿ, ಆದರ್ಶ ಕುಟುಂಬಿ ಎಂದು ಶ್ಲಾಘಿಸಿದರು.
ಸಾಹಿತ್ಯ ಮಂದಿರ ತಾ.ಲ. ರಂಗನಾಥಶೆಟ್ಟರನ್ನು ಸನ್ಮಾನಿಸಿ ಫಲತಾಂಬೂಲದೊಂದಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಮೃತಿ, ಸುಶ್ರೀತ ಪ್ರಾರ್ಥಿಸಿದರು. ಕೆ. ನರಸಿಂಹಯ್ಯ ಸಿದ್ದಾಪುರ ಸ್ವಾಗತಿಸಿದರು. ಸುರೇಶ್ ಅಬ್ಬಿನೊಳೆ ಪ್ರಶಸ್ತಿ ಪತ್ರ ವಾಚಿಸಿದರು. ಪದ್ಮಾಕೃಷ್ಣಮೂರ್ತಿ ನಿರೂಪಿಸಿದರು. ಉಷಾ ಎಂ.ವಿ. ವಂದಿಸಿದರು.