ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಖಾಲಿ ಇರುವ 1.70 ಲಕ್ಷ ಹುದ್ದೆ ಶೀಘ್ರವೇ ಭರ್ತಿ ಮಾಡಿ

Rashmi Kasaragodu
Updated On : 30 May 2013, 11:59 am

ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ  ಖಾಲಿ ಇರುವ 1.70 ಲಕ್ಷ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸರ್ಕಾರದ ಅಧೀನದಲ್ಲಿರುವ ಎಲ್ಲಾ ರೀತಿಯ ಅರೆ ಸರ್ಕಾರಿ ಅನುದಾನಿತ ಸಂಸ್ಥೆಗಳು ಹಾಗೂ ಕಾರ್ಖಾನೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ನಿರುದ್ಯೋಗಿ ಯುವಜನರಿಂದ ವಸೂಲಿ ಮಾಡುವ ಅರ್ಜಿ ಶುಲ್ಕ, ಡಿಡಿ ಮೊದಲಾದ ಶುಲ್ಕಗಳನ್ನು  ಸಂಪೂರ್ಣವಾಗಿ ರದ್ದುಪಡಿಸಬೇಕು. ಶಿಕ್ಷಣದ ಕೇಸರೀಕರಣ ಮತ್ತು ವ್ಯಾಪಾರಿಕರಣ ತಡೆಗಟ್ಟಬೇಕು. ಎಲ್ಲಾ  ಸರ್ಕಾರಿ ಶಾಲಾ ಕಾಲೇಜು ಹಾಸ್ಟೆಲ್ ಹಾಗೂ ವಿವಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜನಸಾಮಾನ್ಯರ ಅಗತ್ಯ ಮೂಲಭೂತ ಸೌಲಭ್ಯಗಳಿಗಾಗಿ ಮತ್ತು ಉದ್ಯೋಗ ಸೃಷ್ಟಿಗಾಗಿ  ಸರ್ಕಾರಿ ಶಿಕ್ಷಣ, ಆರೋಗ್ಯ ಮತ್ತು ಸೇವಾ ಕ್ಷೇತ್ರ ಮುಂತಾದ ಅಗತ್ಯ ವಲಯಗಳನ್ನು  ವಿಸ್ತರಿಸಿ ಸಂಪನ್ಮೂಲಗಳನ್ನು ಒದಗಿಸಬೇಕು. ಎಸ್.ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಮಹಿಳಾ ಮತ್ತು  ಮಕ್ಕಳ ಅಭಿವೃದ್ದಿ ನಿಗಮಗಳಿಗೆ ಈಗ ನಿಗದಿ ಮಾಡಿರುವ ಹಣಕ್ಕಿಂತ ಹತ್ತುಪಟ್ಟು ಹಣವನ್ನು ಒದಗಿಸಬೇಕು. ಖಾಸಗಿರಂಗದಲ್ಲಿ  ಮೀಸಲಾತಿಗಾಗಿ ಕೇಂದ್ರೀಯ ಶಾಸನ ತರುವ  ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.
ಜಂಟಿ ಹೆಸರಲ್ಲಿ: ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಗಂಡ-ಹೆಂಡತಿ ಜಂಟಿ ಹೆಸರಿನಲ್ಲಿ ನೀಡಬೇಕು. ಎಲ್ಲಾ  ಹಂತದ ಉದ್ಯೋಗ ನೇಮಕಾತಿಯಲ್ಲಿ ಅಂಗವಿಕಲರಿಗೆ, ಯುವತಿಯರಿಗೆ ಮೀಸಲಾತಿ ಜಾರಿಗೊಳಿಸಬೇಕು. ಎಲ್ಲಾ ಹಂತದ ಉದ್ಯೋಗ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಕೆಪಿಎಸ್ಸಿಯನ್ನು ಶುದ್ಧೀಕರಿಸಿ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಸರ್ಕಾರ ಮತ್ತು ಅದರ ಅಧೀನದಲ್ಲಿರುವ ಎಲ್ಲಾ ಇಲಾಖೆಗಳಲ್ಲಿನ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ಕ್ಯಾಷುಯಲ್ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲರನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಲಕ್ಷಾಂತರ ಜನರಿಗೆ ಕನಿಷ್ಠ 10 ಸಾವಿರ ರು.  ವೇತನ ನಿಗದಿಪಡಿಸಬೇಕು. ಮಹಾನಗರಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಉದ್ಯೋಗಿಗಳು ಕೆಲಸ ಮಾಡುವ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಉದ್ಯೋಗಸ್ಥ ಯುವಕ-ಯುವತಿಯರಿಗೆ ಹಾಸ್ಟೆಲ್ಗಳನ್ನು ಆರಂಭಿಸಬೇಕು. ತಾಲೂಕುವಾರು ಸ್ಥಳೀಯವಾಗಿ ಕೃಷಿ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಆಧರಿಸಿ ಕೇಂದ್ರದ ನೆರವನ್ನು ಪಡೆದು  ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಬೇಕು. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಜಾನಪದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಯುವಜನರ ಕ್ರೀಡಾ ಸಾಂಸ್ತಿಕೃಕ ಆಕಾಂಕ್ಷೆ ಆಶೋತ್ತರಗಳಿಗೆ ಸ್ಪಂದಿಸುವಂತಹ ಉತ್ತಮ ಯೋಜನೆ ರೂಪಿಸಿ ಸೂಕ್ತ ಬಜೆಟ್ ಬೆಂಬಲ ಒದಗಿಸಬೇಕು ಎಂದು ತಿಳಿಸಿದರು.
ಹಂಪಿ-ಕದಂಬ-ಕರಾವಳಿ ಉತ್ಸವ ಮೊದಲಾದವುಗಳನ್ನು ಜನೋತ್ಸವಗಳನ್ನಾಗಿ ಪರಿವರ್ತಿಸಿ ಜಿಲ್ಲಾ-ರಾಜ್ಯ ಮಟ್ಟದಲ್ಲಿ ಏರ್ಪಡಿಸಬೇಕು. ಬಿಜೆಪಿ ದುರಾಡಳಿತದಲ್ಲಿ  ನಡೆಸಿರುವ ಕೋಮು ದಂಗೆಕೋರರ ಮೇಲಿನ ಕೇಸುಗಳನ್ನು ಅಂದಿನ ಬಿಜೆಪಿ ಸರ್ಕಾರ ರದ್ದು  ಮಾಡಿದೆ. ಇದನ್ನು ಮರು ಪರಿಶೀಲಿಸಿ ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸಬೇಕು. ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ಗಿರಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು. ಮತ್ತು ರಾಜ್ಯಾದ್ಯಂತ ಅನೈಕ್ಯತೆ ಸೃಷ್ಟಿಸುವ ಹಾಗೂ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಎಲ್ಲಾ  ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಲವು ಬೇಡಿಕೆಗಳನ್ನು  ಒಳಗೊಂಡ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಅವರಿಗೆ ಸಲ್ಲಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement