ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾರದೊಳಗೆ ಪ್ರಮುಖ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ

Rashmi Kasaragodu
Updated On : 30 May 2013, 11:59 am

ಕ.ಪ್ರ.ವಾರ್ತೆ   ಕುಣಿಗಲ್ಣ್ ಮೇ 30
ಇನ್ನೊಂದು ವಾರದೊಳಗೆ ಪಟ್ಟಣದ ಪ್ರಮುಖ ಪ್ರದೇಶದಲ್ಲಿನ ಸ್ವಚ್ಛತೆ ಕಾಪಾಡದಿದ್ದಲ್ಲಿ, ಪುರಸಭೆ ಆರೋಗ್ಯ ನಿರೀಕ್ಷಕರ ವಿರುದ್ಧ ಸಾರ್ವಜನಿಕರಿಗೆ ಉಪದ್ರವ ನೀಡಿದ ಕುರಿತಂತೆ  ಪೊಲೀಸರಿಗೆ ದೂರು ನೀಡಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಿಗೆ ಶಾಸಕ ಡಿ.ನಾಗರಾಜಯ್ಯ ಸೂಚನೆ ನೀಡಿದರು.
ಗುರುವಾರ ಸಂಜೆ, ತಾಪಂ ಸಭಾಂಗಣದಲ್ಲಿ ಡೆಂಘೀ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ, ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ಪುರಸಭೆ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ತರಾಟೆಗೆ: ಕಳೆದ ಹತ್ತು ದಿನಗಳಿಂದಲೂ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಹಲವು ಸಭೆ ನಡೆಸಿ, ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಕೇಳಿದರೆ ಏನಾದರೂ ಸಬೂಬು ಹೇಳುತ್ತಿರಾ, ಜನತೆಗೆ ಸಮಸ್ಯೆಯಾದರೆ, ಸಬೂಬು ಕೆಲಸಕ್ಕೆ ಬರೊಲ್ಲಾ  ಎಂದು ಆರೋಗ್ಯ ನಿರೀಕ್ಷಕ ನಟೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಿಂಗಳಿಗೆ ಸಾವಿರಾರು ರು.ಸಂಬಳ ಪಡೆಯುತ್ತಿರಾ, ಪಡೆಯುವ ಸಂಬಳಕ್ಕೆ ನಿಯತ್ತಾಗಿ ಕೆಲಸ ಮಾಡುವ ಪ್ರವೃತ್ತಿ ತೋರಿಸಿ, ನಿಮಗೆ ಹೇಳಿ, ಹೇಳಿ ಸಾಕಾಗಿದೆ. ಇನ್ನೊಂದು ವಾರದೊಳಗೆ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿದ್ದರೆ, ನ್ಯೂಸೆನ್ಸ್ ಕೇಸ್ ಬುಕ್ ಮಾಡಿ ಕ್ರಮ ಕೈಗೊಳ್ಳುವಂತೆ ಟಿಎಚ್ಒಗೆ ಸೂಚನೆ ನೀಡಿದರು.
ಸ್ವಚ್ಚತೆ ನಿರ್ವಹಣೆ ಬಗ್ಗೆ ಪ್ರತಿಯೊಂದಕ್ಕೂ ಕಾರಣ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಮುಖ್ಯಾಧಿಕಾರಿ ಶುಭಾ ಅವರಿಗೆ, ಪುರಸಭೆ ಅಯಕಟ್ಟಿನ ಜವಾಬ್ದಾರಿ ಅಧಿಕಾರಿಯಾಗಿ ಕುಂಟು ನೆಪ ಹೇಳಿದರೆ ಆಗೋಲ್ಲ, ಜನರ ಆರೋಗ್ಯ ಪ್ರಶ್ನೆಯಾಗಿದ್ದು ಸಾಧ್ಯವಿರುವ ಕ್ರಮ ಕೈಗೊಂಡು ಕೂಡಲೆ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸರಿಯಾಗಿ ಕೆಲಸ ಮಾಡಲ್ಲ: ಡೆಂಘೀ ಸೋಂಕಿಗೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡದ ಆರೋಗ್ಯ ಇಲಾಖಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಗ್ರಾಮಾಂತರ ಪ್ರದೇಶದಲ್ಲಿನ ಸೋಂಕು ಶಂಕಿತರ ಬಗ್ಗೆ ಹೇಳುತ್ತಿದ್ದಿರಾ, ಪಟ್ಟಣದಲ್ಲಿನ ಸೋಂಕು ಶಂಕಿತರ ಬಗ್ಗೆ ಹೇಳಿ, ಖಾಸಗಿ ಲ್ಯಾಬ್ಗಳಲ್ಲಿ ದಿನಕ್ಕೆ ಹಲವು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಬಗ್ಗೆ ಮಾಹಿತಿ ಇಲ್ಲವೆ, ಇವೆಲ್ಲಾ ನೋಡಿದರೆ ನೀವು ಹಾಗೂ ನಿಮ್ಮ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಅನುಮಾನ ಮೂಡುತ್ತದೆ. ಜನರ ಆರೋಗ್ಯದ ಬಗ್ಗೆ ಚೆಲ್ಲಾಟವಾಡಬೇಡಿ ಎಂದರು.
ಪರೀಕ್ಷಾ ಕಿಟ್ ಕೊರತೆ: ತಾಲೂಕು ಆರೋಗ್ಯ ವೈದ್ಯಾಧಿಕಾರಿ ಶಾಂತಲಾ, ತಾಲೂಕಿನ ಕೋಡಿಪಾಳ್ಯ, ಗುಜ್ಜೇನಹಳ್ಳಿ, ಬಿದನಗೆರೆಯಲ್ಲಿ ಡೆಂಘೀ ಸೋಂಕಿನ ತರಹವೇ ಬೇರೆ ತರಹದ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಕೊಡಿಗೆಹಳ್ಳಿಯಲ್ಲಿ 20ರಿಂದ30, ಗುಡ್ಡೇನಹಳ್ಳಿಯಲ್ಲಿ 20 ಮಂದಿ, ಬಿದನಗೆರೆಯಲ್ಲಿ ನಾಲ್ವರು ಸೋಂಕಿತರ ರಕ್ತವನ್ನು ಪರೀಕ್ಷೆಗೆ ಕಳಿಸಿದ್ದು, ವರದಿ ಬರಲು ತಡವಾಗುತ್ತಿದೆ ಎಂದರು. ಶಾಸಕರು, ಸ್ಥಳೀಯ ಆಸ್ಪತ್ರೆಯಲ್ಲೆ ಸೋಂಕು ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದಾಗ, ಟಿಎಚ್ಒ ಈಗಾಗಲೆ ಹಲವು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪರೀಕ್ಷಾ ಕಿಟ್ ಕೊರತೆ ಇದೆ ಎಂದರು. ಶಾಸಕರು, ತಾವೇ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಂಡು ಸ್ಥಳೀಯವಾಗಿ ಕಿಟ್ ಪೂರೈಕೆಗೆ ವ್ಯವಸ್ಥೆಗೊಳಿಸುವುದಾಗಿ ತಿಳಿಸಿದರು.
ಅಗತ್ಯ ಕ್ರಮ: ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಬಿಇಒ ಲೋಕೇಶ್ ಅವರಿಗೆ ಸೂಚಿಸಿದ್ದು, ಬಿಇಒ ಈಗಾಗಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ, ಪುರಸಭೆ ವ್ಯಾಪ್ತಿಯಲ್ಲಿ ಡೇಂಘಿ ರೋಗ ಲಕ್ಷಣ ಮತ್ತು  ನಿಯಂತ್ರಣ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ, ಪ್ರಚಾರ ಮಾಡುವುದು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಳ್ಳುವಂತೆ ಶಾಸಕರು ಸೂಚನೆ ನೀಡಿದರು. ತಹಸೀಲ್ದಾರ್ ಜಗದೀಶ್, ಪುರಸಭೆ ಸದಸ್ಯ ಕೆ.ಎಲ್.ಹರೀಶ್ ಸಭೆಯಲ್ಲಿ ಪಾಲ್ಗೊಂಡು ಹಲವು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement