ಹಳೇಪಾಳ್ಯ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ
ತಿಪಟೂರು: ನಗರದ ಹಳೇಪಾಳ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಕುಡಿಯಲು ನೀರಿಲ್ಲದೆ ತೀವ್ರ ತೊಂದರೆಯಾಗುತ್ತಿದೆ. ಇರುವ ಅಲ್ಪಸ್ವಲ್ಪ ನೀರಿಗಾಗಿ ಸಾರ್ವಜನಿಕರು ಟ್ಯಾಂಕ್ ಹತ್ತಿರ ಕಿತ್ತಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಈ ಬಗ್ಗೆ ನಗರಸಭಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಇಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಳೇಪಾಳ್ಯದ ಮಧ್ಯಭಾಗದಲ್ಲಿರುವ ಲಂಬಾಣಿ ತಾಂಡ್ಯ, ದಲಿತ ಕಾಲೋನಿ ಹಾಗೂ ಕಲ್ಕೆರೆ ಬಡಾವಣೆಗಳಲ್ಲಿನ ಜನತೆ ಕುಡಿಯುವ ನೀರಲ್ಲದೆ ಕಳೆದ 6 ತಿಂಗಳಿನಿಂದ ಪರದಾಡುತ್ತಿದ್ದಾರೆ. ಇಲ್ಲಿನ ಮಹಿಳೆಯರು ಕಾಲಿ ಬಿಂದಿಗೆಗಳನ್ನು ಹಿಡಿದು ಟ್ಯಾಂಕ್ ಹತ್ತಿರ ಪ್ರತಿನಿತ್ಯ ಜಗಳವಾಡುವುದು ಸರ್ವೆ ಸಾಮಾನ್ಯವಾಗಿದೆ. ಈ ಬಗ್ಗೆ ನಗರಸಭೆಯ ಗಮನಕ್ಕೆ ತಂದರೂ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸದೆ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಜನತೆ ನಗರಸಭೆ ವಿರುದ್ಧ ಹಿಡಿಶಾಪ ಹಾಕುತಿದ್ದಾರೆ.
ಈ ಬಡಾವಣೆಗಳಲ್ಲಿನ ಜನರು ಕುಡಿಯಲು ಕೊಳವೆ ಬಾವಿ ನೀರನ್ನೇ ಆಶ್ರಯಿಸಿದ್ದು, ಸುತ್ತಮುತ್ತಲಿನ 3-4 ಬಡಾವಣೆಗಳಿಗೆ ಒಂದು ಕೊಳವೆ ಬಾವಿಯಿಂದ ನೀರನ್ನು ಪೂರೈಸಲಾಗುತ್ತಿದೆ. ಈ ಕೊಳವೆ ಬಾವಿಯಲ್ಲಿ ಕಳೆದ 6 ತಿಂಗಳಿನಿಂದ ನೀರು ಕಡಿಮೆ ಬರುತ್ತಿರುವುದರಿಂದ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆ ಜನತೆಯ ನಿದ್ದೆಗೆಡಿಸಿದ್ದು, ನೀರಿಲ್ಲದೆ ಜನತೆ ಹಪಹಪಿಸುತ್ತಿದ್ದಾರೆ.
ನಗರಸಭೆ ಅಧಿಕಾರಿಗಳು ಈಗಲಾದರೂ ಸಮಸ್ಯೆಯ ಬಗ್ಗೆ ಗಮನಹರಿಸಿ ಹಳೇಪಾಳ್ಯಕ್ಕೆ ಸಮರ್ಪಕವಾಗಿ ನೀರೊದಗಿಸಬೇಕು. ಇಲ್ಲವಾದಲ್ಲಿ ನಗರಸಭೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.