ಕಡಲೆಕಾಯಿ ಬಿತ್ತನೆ, ತಂಬಾಕು ನಾಟಿ ಕಾರ್ಯ
ಕ.ಪ್ರ. ವಾರ್ತೆ ಟಿ ರಾಮನಾಥಪುರ ಟಿ ಮೇ 31
ಹೊಲ ಗದ್ದೆಗಳಲ್ಲಿ ಕಡಲೆಕಾಯಿ ಬಿತ್ತನೆ ಹಾಗೂ ತಂಬಾಕು ನಾಟಿ, ಸಸಿ ಮಡಿಯಲ್ಲಿರುವ ಕಳೆ ತೆಗೆಯಲು ರೈತರು ಹರತೆ ಬೇಸಾಯ ಮಾಡುವ ಕಾಲ ಇದಾಗಿದೆ. 3-4 ವರ್ಷಗಳ ಹಿಂದಿನ ಸಾಲಿನ ಬೇಸಿಗೆಯನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿ ಇದರಿಂದ ಹೊಗೆ ಬೀಜ ಸಸಿ ಮಡಿ, ಉಳುಮೆಗೆ ಅನುಕೂಲವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗಿ ಕೆರೆ ಕಟ್ಟೆಗಳು ಒಣಗುತ್ತಿವೆ. ಇದರಿಂದ ದನಕರು, ಹಕ್ಕಿಗಳಿಗೂ ನೀರಿನ ಬರ ಬಂದಿದೆ.
ಈ ಭಾಗದ ರೈತರು ಹೆಚ್ಚು ತಂಬಾಕು, ಮುಸುಕಿನ ಜೋಳ, ಆಲೂಗಡ್ಡೆ ರಾಗಿ ಬೆಳೆಯನ್ನೇ ಹೆಚ್ಚು ಆಶ್ರಯಿಸಿರುವುದರಿಂದ ಬೆಳೆ ತೆಗೆಯಲು ತುಂಬಾ ಹರಸಾಹಸ ಪಡಬೇಕಿದೆ. ಇಲ್ಲಿ ಕೆಲವು ಕಡೆ ನೀರಾವರಿ ಮೂಲಗಳಿಲ್ಲ. ಕಾವೇರಿ ನದಿ ಪಾತ್ರದಲ್ಲಿನ ಜಮೀನು ಆಗಿರುವುದರಿಂದ ನೂರಾರು ಅಡಿ ದೂರದಿಂದ ಪೈಪ್ ಅಳವಡಿಸಿ ನೀರು ಪಡೆದು ಬೇಸಾಯ ಮಾಡಲಾಗುತ್ತಿದೆ. ಮಳೆ ನೆಚ್ಚಿಕೊಂಡು ಹೊಗೆ ಬೀಜ ಹಾಕಲಾಗಿದೆ. ಆದರೆ ಇದುವರೆಗೂ ಮಳೆ ಹೇಳಿಕೊಳ್ಳುವ ಮಟ್ಟದಲ್ಲಿ ಆಗಿಲ್ಲ. ಸಾಲ ಮಾಡಿ ಬೋರ್ವೆಲ್ ಹಾಕಲಾಗಿದೆಯಾದರೂ ವಿದ್ಯುತ್ ಸಕಾಲದಲ್ಲಿ ದೊರೆಯದ ಪರಿಣಾಮ ಬೆಳೆಗೆ ತೀವ್ರ ಹಿನ್ನೆಡೆಯಾಗಿದೆ.
ಕಾವೇರಿ ನದಿ ಪಾತ್ರದ ಕಟ್ಟೇಪುರ ನಾಲೆಯ ಎಡದಂಡೆ ಹಾಗೂ ಬಲದಂಡೆ ಮತ್ತು ಹಾರಂಗಿ ನಾಲೆಯ ಎಡದಂಡೆ ಹಾಗೂ ಬಲದಂಡೆ ಹಾಗೂ ನೀರಿನ ಮೂಲಗಳನ್ನು ಹೊಂದಿರುವವರು ಈಗಾಗಲೇ ಸಾವಿರಾರು ಎಕರೆ ಪ್ರದೇಶದಲ್ಲಿ ನಾಟಿ ಕಾರ್ಯವನ್ನು ಮುಗಿಸಿ ಬೇಸಾಯದಲ್ಲಿ ನಿರತರಾಗಿದ್ದಾರೆ. ತಾಲೂಕಿನ ಹಲವಾರು ಕೆರೆಗಳಲ್ಲಿ ನೀರಿಲ್ಲದೆ ಕೆರೆ ಅಂಗಳ ಮತ್ತು ತೋಟದಲ್ಲಿ ಗುಂಡಿತೋಡಿ ಸಂಗ್ರಹವಾಗುವ ನೀರಿನಿಂದ ತಂಬಾಕು ಇತರೆ ಸಸಿಮಡಿಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಒಂದೂವರೆ ತಿಂಗಳು ಸಸಿಮಡಿಗೆ ಕಳೆದಿದ್ದು ಕೆಲವು ಕಡೆ ನೀರಿಲ್ಲದೆ ಒಣಗತೊಡಗಿವೆ. ಕೆಲವರು ಮಳೆರಾಯನಿಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ.