ಗೋಮಾಳದಲ್ಲಿ ನಿವೇಶನ ಹಂಚಿಕೆ ವದಂತಿ; ಗುಡಿಸಲು ಹಾಕಿಕೊಂಡು ಅತಿಕ್ರಮ ಪ್ರವೇಶ
ಕ.ಪ್ರ. ವಾರ್ತೆ ಕುಣಿಗಲ್ ಮೇ 31
ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡವರಿಗೇ ನಿವೇಶನ ನೀಡುತ್ತಾರೆಂಬ ವದಂತಿ ಹರಡಿದ ಕಾರಣ, ಶುಕ್ರವಾರ ನೂರಾರು ಮಂದಿ ಸರ್ಕಾರದ ಗೋಮಾಳ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡ ಪರಿಣಾಮ, ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತುಯ ಈ ನಿಟ್ಟಿನಲ್ಲಿ ತಾಲೂಕು ಅಡಳಿತ ಮಧ್ಯೆ ಪ್ರವೇಶಿಸಿ, ಪೊಲೀಸ್ ಸಹಕಾರದಿಂದ ಅತಿಕ್ರಮಣಕಾರರನ್ನು ತೆರವುಗೊಳಿಸಿದ ಘಟನೆ ನಡೆದಿದೆ.
ಪಟ್ಟಣದಿಂದ ಮೂರು ಕಿ.ಮೀ ದೂರದ ಪುರಸಭೆ ಘನತ್ಯಾಜ್ಯ ವಿಲೇವಾರಿ ಮಾಡುವ ಜಾಗದ ಪಕ್ಕದಲ್ಲಿ ಗವಿಮಠ ಗ್ರಾಮದ ಸಮೀಪ ಟಿ.ಹೊಸಹಳ್ಳಿ ಗ್ರಾಮದ ಸರ್ವೇ ನಂಬರ್ 13ರಲ್ಲಿ 16ಎಕರೆ ಸರ್ಕಾರಿ ಗೋಮಾಳವಿದ್ದು, ಸದರಿ ಪ್ರದೇಶ ಕೊರಟೆಗೆರೆ - ಕೊಳ್ಳೆಗಾಲ ರಾಜ್ಯ ಹೆದ್ದಾರಿಗೆ ಹೊಂದುಕೊಂಡಂತಿದೆ, ಗುರುವಾರ ರಾತ್ರಿ ರಾಜಕೀಯ ಪಕ್ಷವೂಂದರ ಮುಖಂಡರ ಬೆಂಬಲಿಗರು ಬೇರೆ ಉದ್ದೇಶಕ್ಕೆ ಗುಡಿಸಲುಗಳನ್ನು ಸದರಿ ಸರ್ಕಾರಿ ಪ್ರದೇಶದಲ್ಲಿ ಹಾಕಿಕೊಳ್ಳಲು ಮುಂದಾದರು. ಈ ವಿಷಯ ಬೇರೆ ತರಹದ ತಿರುವು ಪಡೆದು ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡವರಿಗೆ ಅ ನಿವೇಶನ ನೀಡುತ್ತಾರೆಂಬ ವದಂತಿ ಹಬ್ಬಿತು.
ತಮ್ಮದೆಂದು ಬಿಂಬಿಸಿಕೊಂಡರು: ಈ ವಿಷಯ ಶುಕ್ರವಾರ ಬೆಳಗ್ಗೆ ಕುಣಿಗಲ್ ಪಟ್ಟಣ ಸೇರಿದಂತೆ, ಅವರಗೆರೆ, ಗವಿಮಠ, ಹೇರೂರು, ಶೆಟ್ಟಿಗೆಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹರಡಿದ ಪರಿಣಾಮ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ, ಇಡೀ ಪ್ರದೇಶದಲ್ಲೆ ತಮಗೆ ಸಿಕ್ಕ, ಸಿಕ್ಕಲೆಲ್ಲಾ ಗುಡಿಸಲು ಹಾಕಿಕೊಂಡರೆ, ಮತ್ತೆ ಕೆಲವರು ಸೀರೆ, ಹರಕಲು ಬಟ್ಟೆ ಹಾಕಿಕೊಂಡು ನಿವೇಶನ ತಮ್ಮದೆಂದು ಬಿಂಬಿಸತೊಡಗಿದರು. ಇನ್ನು ಮುಖ್ಯರಸ್ತೆ ಬದಿಗೆ ಗುಡಿಸಲು ಹಾಕಲು ಪೈಪೋಟಿ ನಡೆದು ಕೆಲವರ ನಡುವೆ ಜೋರಾಗಿ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಗೊಂದಲಮಯವಾಯಿತು.
ಅಧಿಕಾರಿಗಳ ಭೇಟಿ: ಸರ್ಕಾರಿ ಪ್ರದೇಶದಲ್ಲಿ ಗುಡಿಸಲು ಹಾಕುತ್ತಿರುವ ವಿಶಯ ತಿಳಿದ ತಹಶೀಲ್ದಾರ್ ಜಗದೀಶ್, ಸಿಪಿಐ ಧಮೇಂದ್ರ ಪೊಲೀಸ್ ಹಾಗೂ ಕಂದಾಯ ಇಲಾಖೆ ಮತ್ತು ಜಿಪಂ ಇಲಾಖೆಯ ಸಿಬ್ಬಂದಿಗಳ ನೆರವಿನಿಂದ ಸ್ಥಳಕ್ಕೆ ತೆರಳಿ, ಗುಡಿಸಲು ಹಾಕಿಕೊಂಡವರನ್ನು ಕರೆದು ಚರ್ಚಿಸಿ, ಸದರಿ ಪ್ರದೇಶ ಸರ್ಕಾರದ ಸ್ವತ್ತಾಗಿದ್ದು, ಈ ಪ್ರದೇಶ ಯಾರಿಗೂ ಹಂಚಿಕೆಯಾಗದ ಕಾರಣ ಯಾವುದೇ ಕಾರಣಕ್ಕೂ ಸರ್ಕಾರಿ ಪ್ರದೇಶದ ಅತಿಕ್ರಮಣ ತರವಲ್ಲ, ಕೂಡಲೆ ಜಾಗ ಖಾಲಿ ಮಾಡುವಂತೆ ಇಲ್ಲವಾದಲ್ಲಿ ನಿಯಯಾನುಸಾರ ಕ್ರಮ ಕೈಗೊಂಡು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.
ಗ್ರಾಮಸ್ಥರು ಸೇರಿಕೊಂಡರು: ಈ ಹಂತದಲ್ಲಿ ಕೆಲ ಗ್ರಾಮಸ್ಥರು ನಮಗೆ ಆಶ್ರಯ ನಿವೇಶನ ಸಿಕ್ಕಿಲ್ಲ ದಯಮಾಡಿ ಇಲ್ಲಿಯೇ ಸ್ಥಳವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ತಹಸೀಲ್ದಾರ್ ಈ ಬಗ್ಗೆ ಗ್ರಾಪಂಗೆ ಅರ್ಜಿ ನೀಡಿ ಪಡೆದುಕೊಳ್ಳುವಂತೆ ಸೂಚಿಸಿ, ನಿವೇಶನ ತೆರವುಗೊಳಿಸದಿದ್ದರೆ, ಪೊಲೀಸ್ ಬಲ ಪ್ರಯೋಗಿಸುವ ಎಚ್ಚರಿಕೆ ನೀಡಿದ ಮೇರೆಗೆ, ಬಂದದಾರಿಗೆ ಸುಂಕವಿಲ್ಲವೆನ್ನುವಂತೆ ಎಲ್ಲರೂ ಗುಡಿಸಲು ತೆರವುಗೊಳಿಸಿಕೊಂಡು, ವದಂತಿ ಹಬ್ಬಿಸಿದವರಿಗೆ ಹಿಡಿಶಾಪ ಹಾಕಿದರು.