ಸುರಕ್ಷಿತ ಕೀಟನಾಶಕ ಬಳಕೆ ಕುರಿತ ಕಾರ್ಯಾಗಾರ
ತಿಪಟೂರು: ತಾಲೂಕಿನ ಚಿಕ್ಕನಾಯಕನಹಳ್ಳಿ ಕೃಷಿ ಇಲಾಖೆ ವತಿಯಿಂದ ಡಾ. ಅಂಬೇಡ್ಕರ್ ಭವನದಲ್ಲಿ ರೈತರಿಗೆ ಮತ್ತು ಅನುವುಗಾರರಿಗೆ ಸುರಕ್ಷಿತ ಕೀಟ ನಾಶಕ ಬಳಕೆ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು. ತಿಪಟೂರು ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಷಯ ತಜ್ಞ ಕೆ.ಎಂ.ಶ್ರೀನಿವಾಸರೆಡ್ಡಿ ಸುರಕ್ಷಿತ ಕೀಟ ನಾಶಕ ಬಳಕೆ ಹಾಗೂ ಉಪಯೋಗ ವಿವರಿಸಿದರು. ಕೇಂದ್ರದ ಕೃಷಿ ವಿಸ್ತರಣೆ ವಿಷಯ ತಜ್ಞ ಎಂ.ಹೆಚ್.ಶಂಕರ ಭೂ ಚೇತನ ಕಾರ್ಯಕ್ರಮದ ವೈಶಿಷ್ಟ್ಯತೆ ಮತ್ತು ಅನುವುಗಾರರ ಪಾತ್ರ ತಿಳಿಸಿದರು.
ಉಪನ್ಯಾಸಕರು ಹಾಗೂ ಗೋಪಾಲನಹಳ್ಳಿ ಹಾರಕ ಬೆಳೆಗಾರರ ಸಂಘದ ಸದಸ್ಯರಾದ ರಘು ಮಾತನಾಡಿ, ಸಂಘಗಳ ಪ್ರಾಮುಖ್ಯತೆ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಸಂಘಗಳ ಪಾತ್ರ ತಿಳಿಸಿದರು.
ಚಿಕ್ಕನಾಯಕನಹಳ್ಳಿ ಸಹಾಯಕ ಕೃಷಿ ನಿರ್ದೇಶಕ ಡಾ.ಕೃಷ್ಣಪ್ಪ, ಕಸಬಾ ಕೃಷಿ ಅಧಿಕಾರಿ ಕಿರಣ, ತಾಪಂ ಸದಸ್ಯರು ಹಾಗೂ ಇನ್ನಿತರ ಅಧಿಕಾರಿಗಳು ಸೇರಿದಂತೆ ಸುಮಾರು 100 ಜನ ರೈತರು ಮತ್ತು ಅನುವುಗಾರರು ಭಾಗವಹಿಸಿದ್ದರು.