ದೇಹ, ಮನಸ್ಸಿನ ಸುಸ್ಥಿತಿಗೆ ಕ್ರೀಡೆ ಅಗತ್ಯ
ಕನ್ನಡಪ್ರಭ ವಾರ್ತೆ, ತುಮಕೂರು, ನ.26
ದೇಹ ಮತ್ತು ಮನಸ್ಸಿನ ಸುಸ್ಥಿತಿಗೆ ಕ್ರೀಡೆ ಅತ್ಯಗತ್ಯ ಎಂದು ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದರು.
ಅವರು ಶಿರಾ ತಾಲೂಕಿನ 12 ಹಳ್ಳಿಗಳಲ್ಲಿ ವಿವೇಕ ಶೈಕ್ಷಣಿಕ ಸಂಪನ್ಮೂಲ ಕೇಂದ್ರಗಳ ಮಕ್ಕಳಿಗೆ ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಯೂತ್ ಫಾರ್ ಸೇವಾ ಹಾಗೂ ಪ್ರಕೃತಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಶಿರಾ ತಾಲೂಕು ತರೂರಿನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕ್ರೀಡೋತ್ಸವವನ್ನು ಕುರಿತು ಮಾತನಾಡಿದರು.
ಕ್ರೀಡೆಯು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ ಕ್ರೀಡೆಗೆ ಚಿಕಿತ್ಸಕ ಗುಣವು ಇದ್ದು ಮಕ್ಕಳ ಮನೋತಜ್ಞರು ಪ್ಲೇ ತೆರಪಿಯನ್ನು ಬಳಸುವುದು ಇದಕ್ಕೆ ಒಂದು ಉದಾಹರಣೆಯಾಗಿದೆ ಎಂದರು.
ಅವಕಾಶ ವಂಚಿತ ಮಕ್ಕಳಿಗೆ ಕ್ರೀಡೆಯನ್ನು ಒಳಗೊಂಡಂತೆ ಎಲ್ಲಾ ಸೌಲಭ್ಯಗಳು ದೊರಕಬೇಕು. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹಳ್ಳಿಗಳ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೋಸ್ಕರ ಶಿರಾ ತಾಲೂಕಿನ ಸುಮಾರು 12 ಹಳ್ಳಿಗಳಲ್ಲಿ ವಿವೇಕ ಶೈಕ್ಷಣಿಕ ಸಂಪನ್ಮೂಲ ಕೇಂದ್ರಗಳನ್ನು ತೆರೆದು ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ ತೊಡಗಿದೆ. ಈ ಕಾರ್ಯಕ್ರಮಕ್ಕೆ ಯೂಥ್ ಫಾರ್ ಸೇವಾ ಸಂಸ್ಥೆಯು ಹೆಚ್ಚಿನ ಸಹಕಾರ ನೀಡಿದ್ದು ಅವರೆಲ್ಲರಿಗೂ ನಮ್ಮೆಲ್ಲರಪರವಾಗಿ ಧನ್ಯವಾದ ಎಂದರು.
ಬ್ರಹ್ಮಸಂದ್ರ ಚಾಂಪಿಯನ್: ಕ್ರೀಡೋತ್ಸವದಲ್ಲಿ ಹಗ್ಗ ಜಗ್ಗಾಟ, ಗೋಣಿ ಚೀಲ ಓಟ, ಓಟ, ರಿವರ್ಸ್ ರಿಲೆ, ಮಡಿಕೆ ಒಡೆಯುವ ಆಟ ಮುಂತಾದ ಆಟಗಳನ್ನು ಮಕ್ಕಳಿಗೆ ಸಂಘಟಿಸಿದ್ದು ಬ್ರಹ್ಮಸಂದ್ರ ತಂಡವು ಚಾಂಪಿಯನ್ ಶಿಪ್ ಪಡೆದುಕೊಂಡಿತು. ಕಾರ್ಯಕ್ರಮದ ನಂತರ ಮಕ್ಕಳಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಲಕ್ಷ್ಮಿಕಾಂತ್, ವಿಜಯ್ ಮಹಂತೇಶ್, ತರೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಶಿವಣ್ಣ, ಪ್ರಕೃತಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಮಹೇಶ್, ಸಂಸ್ಥೆಯ ನಿರ್ದೇಶಕ ರಮೇಶ್ ಬಾಬು, ಸಂಯೋಜಕ ರಂಗರಾಜು, ತರೂರು ಸಿದ್ಧಗಂಗಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಟರಾಜು, ಸಾ.ಕಿ.ಪ್ರಾ ಶಾಲೆಯ ಎಸ್ಡಿ.ಎಂಎಂಸಿ ಅಧ್ಯಕ್ಷ ಚೆನ್ನಬಸವಣ್ಣ ಹಾಗೂ ಎಲ್ಲಾ ಕೇಂದ್ರಗಳ ಸುಮಾರು 300 ಮಕ್ಕಳು, ಸಂಪನ್ಮೂಲ ಕೇಂದ್ರಗಳ ಶಿಕ್ಷಕರು ಹಾಗೂ ತರೂರಿನ ಗ್ರಾಮಸ್ಥರು ಭಾಗವಹಿಸಿದ್ದರು.