ಸಂಗೀತ ನಿರ್ದೇಶಕ ಹಂಸಲೇಖ ಟ್ರಸ್ಟ್ನೊಂದಿಗೆ ಒಡಂಬಡಿಕೆ
ಕನ್ನಡಪ್ರಭ ವಾರ್ತೆ,ತುಮಕೂರು, ನ.26
ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದೊಂದಿಗೆ ಸಂಗೀತ ಮತ್ತು ಕಲೆಯ ಶಿಕ್ಷಣ ನೀಡಲು ತುಮಕೂರಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲವು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ದೇಸಿ ಟ್ರಸ್ಟ್ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಹಂಸಲೇಖ ದಂಪತಿ ಸಿಐಟಿ ಕಾರ್ಯದರ್ಶಿ ಜಿ.ಬಿ ಜ್ಯೋತಿಗಣೇಶ್ ಅವರನ್ನು ಭೇಟಿ ಮಾಡಿ ಒಡಂಬಡಿಕೆಗೆ ಸಹಿ ಹಾಕಿದರು.
ತಾಂತ್ರಿಕ ಪದವಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಕಲೆ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಹೊಂದಿರುತ್ತಾರೆ. ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ ಎಂದು ಹಂಸಲೇಖ ಅವರು ಒಡಂಬಡಿಕೆ ಸಹಿಹಾಕುತ್ತ ಅಭಿಪ್ರಾಯಪಟ್ಟರು.
ಸಿಐಟಿ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಪ್ರಶಂಸಿಸಿದರು.
ಜ್ಯೋತಿ ಗಣೇಶ್ ಮಾತನಾಡಿ ಸಿಐಟಿಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಈ ಒಡಂಬಡಿಕೆ ವಿದ್ಯಾರ್ಥಿಗಳ ಕಲೆ ಮತ್ತು ಸಾಹಿತ್ಯದ ಜ್ಞಾನದ ಹಸಿವನ್ನು ತಣಿಸಲು ಒಂದು ಹೆಜ್ಜೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಸುರೇಶ್ ಕುಮಾರ್ ಅವರು, ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಕಲೆ ಒತ್ತಡ ನಿವಾರಿಸಲು ಸಹಕಾರಿಯಾಗಿದ್ದು, ತಾಂತ್ರಿಕ ಶಿಕ್ಷಣದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಕಲೆಯ ಜ್ಞಾನ ತುಂಬ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಹಂಸಲೇಖರವರೊಡನೆ ಸಂವಾದ ನಡೆಸಿದರು.