ಅಪೌಷ್ಟಿಕತೆ ಕೆಳವರ್ಗದವರಲ್ಲೇ ಹೆಚ್ಚು
ತುಮಕೂರು: ಅಪೌಷ್ಟಿಕತೆ ಕೆಳವರ್ಗಗಳಲ್ಲಿ ಮಾತ್ರ ಕಂಡುಬರುತ್ತಿದೆ. ಇದನ್ನು ಒಡೆದು ಹಾಕುವಂತಹ ಬದುಕನ್ನು ರೂಪಿಸುವ ಕೆಲಸ ಮಾಡಬೇಕಿದೆ ಎಂದು ಮಂಗಳೂರು ವಿವಿ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ಬಿ. ಶಿವರಾಮಶೆಟ್ಟಿ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರು ವಿವಿಯಲ್ಲಿ ಮಂಗಳೂರು ವಿವಿ ವತಿಯಿಂದ ಕನಕ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕನಕ ಚಿಂತನ ಪ್ರಚಾರೋಪನ್ಯಾಸ ಮಾಲೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇಂದು ಜಾತಿ ಆಧಾರದ ಮೇಲೆ ಸಮಾಜವನ್ನು ಗ್ರಹಿಸುವ ಕೆಲಸ ನಡೆದಿದೆ. ಇದೊಂದು ಭಾರತೀಯ ಸಮಾಜದ ತಪ್ಪು ಗ್ರಹಿಕೆಯಾಗಿದೆ. ಶಿಕ್ಷಣ, ಉದ್ಯಮ, ವೃತ್ತಿ ಎಲ್ಲದರಲ್ಲೂ ಜಾತಿ ತಳಕು ಹಾಕಿಕೊಂಡಿದೆ. ಜಾತಿ ಸಾಮಾಜಿಕ ಹಾಗೂ ಆರ್ಥಿಕ ಸ್ವರೂಪದಲ್ಲೂ ಇದೆ. ಸಮರೂಪದ ಸಮಾಜ ನಿರ್ಮಾಣ ಮಾಡಲು ಆಯಾ ಕಾಲಘಟ್ಟದಲ್ಲಿ ಕೆಲಸಗಳು ನಡೆದೇ ಇವೆ. ಕನಕದಾಸರು ಭಾರತೀಯ ಸಾಂಸ್ಕೃತಿಕ ಲೋಕದ ಕುಂದು-ಕೊರತೆಗಳನ್ನು ತಮ್ಮ ವಿಡಂಬನಾತ್ಮಕ ಕೀರ್ತನೆಗಳ ಮೂಲಕ ಹೊರ ತಂದರು ಎಂದರು.
ಮಂಗಳೂರು ವಿವಿ ಜನಸಾಮಾನ್ಯರು, ವಿದ್ಯಾರ್ಥಿಗಳ ಬಳಿಗೆ ಕನಕಪೀಠದ ಮೂಲಕ ಕನಕರ ಚಿಂತನೆಗಳನ್ನು ಕೊಂಡೊಯ್ಯುತ್ತಿದೆ ಎಂದು ಪ್ರೊ.ಬಿ. ಶಿವರಾಮಶೆಟ್ಟಿ ತಿಳಿಸಿದರು.