ಟಿ.ಬಿ.ಜೆ ಶಿಲಾನ್ಯಾಸ ಮಾಡಿದಲ್ಲಿ ಬಾಬೂಜಿ ಭವನ ಬೇಡ
ಶಿರಾ: ಸಚಿವ ಟಿ.ಬಿ.ಜಯಚಂದ್ರ ಅವರು ಶಿಲಾನ್ಯಾಸ ಮಾಡಿರುವ ಜಾಗದಲ್ಲಿ ಡಾ.ಬಾಬು ಜಗಜೀವನ ರಾಂ ಭವನ ಖಂಡಿತವಾಗಿಯೂ ನಿರ್ಮಾಣ ಮಾಡುವುದು ಬೇಡ ಎಂದು ವಿವಿಧ ದಲಿತ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿದವು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ), ಮಾದಿಗ ದಂಡೋರ, ಬಿ.ಎಸ್.ಪಿ. ಇತರ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ಕರೆದು ಈ ವಿಷಯ ತಿಳಿಸಿದರು.
ಮುಖಂಡರಾದ ಗಿರಿಯಪ್ಪ ಅವರು ಮಾತನಾಡಿ ಬಾಬು ಜಗಜೀವನ ರಾಂ ಭವನದ ಕಟ್ಟಡ ಆಗಬೇಕಾಗಿರುವುದು ಸರ್ಕಾರಿ ಜಾಗದಲ್ಲೇ ಹೊರತು ಖಾಸಗಿ ವ್ಯಕ್ತಿಗಳ, ಸಂಘ ಸಂಸ್ಥೆಗಳ ಜಾಗದಲ್ಲಲ್ಲ ಎಂದು ತಿಳಿಸಿ. ಇಂತಹ ಜಾಗದಲ್ಲಿ ಭವನ ನಿರ್ಮಿಸಿದರೆ ಕೆಲವೇ ವ್ಯಕ್ತಿಗಳ, ಕೆಲವೇ ಜನಾಂಗದ ಸ್ವತ್ತಾಗುತ್ತದೆ. ಅದು ಸಾರ್ವಜನಿಕವಾಗಿ ಉಪಯೋಗವಾಗಲಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ನಡುವೆ ಒಡಕು: ದಲಿತ ಮುಖಂಡರಿಗೆ ಆಹ್ವಾನಿಸದೆ ಕೇವಲ ಕೆಲವೇ ಕೆಲವರನ್ನು ಆಹ್ವಾನಿಸಿ ತರಾತುರಿಯಲ್ಲಿ ಕಟ್ಟಡದ ಶಂಕುಸ್ಥಾಪನೆಯನ್ನು ಕಾನೂನು ಸಚಿರು ನೆರವೇರಿಸಿದ್ದಾದರೂ ಏಕೆ ಎಂದು ಪ್ರಶ್ನಿಸಿದ ಅವರು ಇದರಿಂದ ದಲಿತರ ನಡುವೆ ಒಡಕುಂಟಾಗುವುದಿಲ್ಲವೇ ಎಂದರು.
ಕಾನೂನಿನ ಅರಿವಿಲ್ಲವೇ: ರಾಜ್ಯ ಬಿ.ಎಸ್.ಪಿ. ಕಾರ್ಯದರ್ಶಿ ಜಿ.ಎನ್.ರಾಜಸಿಂಹ ಅವರು ಮಾತನಾಡಿ ಭವನದ ಕಟ್ಟಡಕ್ಕೆ ಆದಿ ಜಾಂಬವ ಮಠದ ಸ್ವಾಮಿಗಳು ದಾನ ನೀಡಿದ್ದಾರೆ. ಈ ಜಮೀನನ್ನು ಮೊದಲು ನಿವೃತ್ತ ಇನ್ಸೆಪೆಕ್ಟರ್ ನರಸಿಂಹಯ್ಯ ಎನ್ನುವವರು ದಲಿತರದ್ದೆ ಆದ ಶಿರಾ ನಗರದ ರಂಗನಾಥ ನಗರದ ಅಜ್ಜಣ್ಣಪ್ಪ ಎನ್ನುವವರಿಂದ, ಅವರಿಗೆ ಬಗರ್ ಹುಕುಂ ಸಾಗುವಳಿಯಿಂದ ಬಂದಂತಹ ಜಮೀನನ್ನು ಕ್ರಯಕ್ಕೆ ಪಡೆದಿದ್ದು, ನಂತರ ಮಠಕ್ಕೆ ದಾನ ನೀಡಿದ್ದು, ಸರ್ಕಾರದ ಆದೇಶದ ಪ್ರಕಾರ ದಲಿತರ ಜಮೀನನ್ನು ಯಾರಿಗೂ ಪರಬಾರೆ ಮಾಡಬಾರದು. ಇಂತಹ ಕಾನೂನಿ ತೊಡಕಿರುವ ಜಮೀನಿನಲ್ಲಿ ಡಾ.ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಹೊರಟಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕಾನೂನಿನ ಅರಿವಿಲ್ಲವೆ ಎಂದು ಪ್ರಶ್ನಿಸಿದರು.
ಒಡಕುಂಟು ಮಾಡುವ ಸಚಿವರು: ನ.20 ರಂದು ಲ್ಯಾಂಡ್ ಆರ್ಮಿಯ ಪ್ರಮುಖರು ಸರ್ಕಾರಿ ಕಟ್ಟಡದಲ್ಲಿ ಕೆಲವೇ ಕೆಲವು ದಲಿತ ಮುಖಂಡರನ್ನು ಕರೆಸಿ ಸಭೆ ಮಾಡಿ ಕಟ್ಟಡ ಶಂಕುಸ್ಥಾಪನೆ ವಿಚಾರವಾಗಿ ಸಭೆ ನಡೆಸಿದ್ದು, ಉಳಿದ ದಲಿತಮುಖಂಡರನ್ನು ಕರೆಸದೆ ದಲಿತರಲ್ಲಿಯೇ ಒಡಕನ್ನುಂಟು ಮಾಡಲು ಸಚಿವರು ಹೊರಟಿದ್ದಾರೆ ಎಂದು ಆರೋಪಿಸಿದರು. ಶಿರಾ ಪಟ್ಟಣಕ್ಕೆ ಹತ್ತಿರದಲ್ಲಿಯೇ ಸರ್ಕಾರಿ ಜಮೀನು ಇದೆ. ಹೊಸ ಸ್ಥಳದಲ್ಲಿ ಕಟ್ಟಡ ಬರಲಿ. ಊರಿನ ಹೊರಗಿರುವ ಸುಮಾರು ನಾಲ್ಕೈದು ಕಿ.ಮೀ. ದೂರವಿರುವ ಸಾರ್ವಜನಿಕ ಸಂಪರ್ಕ ಇಲ್ಲದ ಸ್ಥಳದಲ್ಲಿ ಭವನ ನಿರ್ಮಾಣ ಮಾಡುವುದು ಬೇಡ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ಸಂಚಾಲಕ ಟೈರ್ ರಂಗನಾಥ್, ಮಾದಿಗ ದಂಡೋರ ರಾಜ್ಯ ಕಾರ್ಯಾಧ್ಯಕ್ಷ ಮಾಗೋಡು ಭೂತರಾಜು, ಮಾಜಿ ನಗರಸಭಾ ಸದಸ್ಯ ಕೆ.ಮಂಜುನಾಥ್, ಖಚಾಂಚಿ ರಾಜು, ಮಹೇಶ್, ಕಾರೇಹಳ್ಳಿ ರಂಗನಾಥ್, ಕಂಬಣ್ಣ ಸೇರಿದಂತ ಹಲವರು ಹಾಜರಿದ್ದರು.