ಬಸವಣ್ಣ ಶ್ರೇಷ್ಠ ಜೀವ ವಿಜ್ಞಾನಿ
ತುಮಕೂರು: 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ವಚನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರೊಬ್ಬ ಶ್ರೇಷ್ಠ ಪ್ರಕೃತಿ ವಿಜ್ಞಾನಿ ಹಾಗೂ ಜೀವ ವಿಜ್ಞಾನಿಯಾಗಿದ್ದರು ಎಂದು ವೇದ್ಯವಾಗುತ್ತದೆ ಎಂದು ತುಮಕೂರು ವಿವಿ ಕುಲಪತಿ ಡಾ. ಎ.ಎಚ್. ರಾಜಾಸಾಬ್ ಹೇಳಿದರು. ಅವರು ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ವಿದ್ಯಾವಾಹಿನಿ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ್ದ 227ನೇ ಸಾಪ್ತಾಹಿಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನಗಳಲ್ಲಿ ವೈಜ್ಞಾನಿಕತೆ ವಿಷಯದ ಬಗ್ಗೆ ಮಾತನಾಡಿದರು.
ಬಸವಣ್ಣನವರು ವಚನವೊಂದರಲ್ಲಿ ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂದು ಹೇಳುವ ಮೂಲಕ ವಿಕಾಸವಾದಕ್ಕೆ ಒತ್ತು ನೀಡಿದ್ದಾರೆ. ಬದಲಾವಣೆಯ ಸಂಕೇತವಾದ ಜಂಗಮತ್ವವು ಇಲ್ಲದಿದ್ದರೆ ಕ್ರಾಂತಿಯೇ ಆಗುತ್ತಿರಲಿಲ್ಲ. ಆದ ಕಾರಣ ಅವರು ಸ್ಥಾವರಗಳನ್ನು ಖಂಡಿಸಿದ್ದರು. ಬುದ್ಧನ ನಂತರ ಮೂರ್ತರೂಪದ ದೇವರನ್ನು ನಿರಾಕರಿಸಿದವರು ಬಸವಣ್ಣನವರು ಮಾತ್ರ. ದೇವರು ಒಂದು ಅಮೂರ್ತ ರೂಪ, ಅದೊಂದು ದಿವ್ಯಶಕ್ತಿಯಾಗಿದೆ. ಆದ್ದರಿಂದ ಬುದ್ಧ, ಬಸವರು ಮೂರ್ತಿ ಪೂಜೆ ಮಾಡಲಿಲ್ಲ. ಅವರು ಎಲ್ಲವನ್ನು ಮೀರಿ ಬೆಳೆದವರು.
ದೂರದೃಷ್ಟಿ: ಬಸವಣ್ಣನವರು ದೇವಲೋಕ ಬೇರೆಲ್ಲೂ ಇಲ್ಲ ಎಂದು ಹೇಳುವ ಮೂಲಕ ಸ್ವರ್ಗ ನರಕಗಳ ಪರಿಕಲ್ಪನೆಗಳನ್ನು ವಿರೋಧಿಸುತ್ತಾ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಹೇಳಿ ಒಳ್ಳೆಯ ನಡೆ ನುಡಿಗೆ ಒತ್ತು ನೀಡಿದ್ದಾರೆ. ಕೆಲವೊಂದು ವಚನಗಳಲ್ಲಿ ಭೂಮಿ, ಬೀಜ, ಹೂ, ಕಾಯಿ, ಹಣ್ಣುಗಳನ್ನು ಸೊಗಸಾಗಿ ವರ್ಣಿಸುವುದನ್ನು ಅವಲೋಕಿಸಿದಾಗ ಅವರೊಬ್ಬ ಪ್ರಕೃತಿ ವಿಜ್ಞಾನಿಯಂತೆ ಕಾಣುತ್ತಾರೆ. ನೀ ನೊಲಿದೊಡೆ ಕೊರಡು ಕೊನರುವುದಯ್ಯ ಎಂಬ ವಚನದಲ್ಲಿ ಇಂದಿನ ಡಿ.ಎನ್.ಎ. ತಂತ್ರಜ್ಞಾನದ ಮೂಲಕ ಸಾಧ್ಯತೆಯನ್ನು ನಿಜವೆಂಬಂತೆ ವೈಜ್ಞಾನಿಕ ಸಂಶೊಧನೆ ಇಲ್ಲದ ಆ ಕಾಲದಲ್ಲೇ ದೂರದೃಷ್ಟಿಯಿಂದ ಹೇಳಿದ್ದಾರೆ.
ಮಾನವೀಯ ಧರ್ಮ: ನನ್ನ ಪ್ರಕಾರ ಯಾವ ಧರ್ಮವೂ ಇಲ್ಲ. ಆದರೆ ಒಂದೇ ಒಂದು ಧರ್ಮವಿದೆ. ಅದೇ ಮಾನವೀಯ ಧರ್ಮ. ಮಾನವೀಯತೆ ಬೇಕು ಎನ್ನುವವರು ಮಾನವೀಯ ಧರ್ಮಕ್ಕೆ ಸೇರುತ್ತಾರೆ. ಮಾನವೀಯತೆಗಿಂತ ಬೇರೆ ದೇವರಿಲ್ಲ. ಮಾನವೀಯ ಧರ್ಮವೇ ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ನೂತನ ಅಧ್ಯಕ್ಷ ಡಾ. ಕೆ. ರಾಜಶೇಖರ್ ಮಾತನಾಡಿ ವೈಜ್ಞಾನಿಕ ದೃಷ್ಟಿಯು ವಿಜ್ಞಾನಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಶಂಕರಾಚಾರ್ಯರು ಪ್ರಪ್ರಥಮ ವಿಜ್ಞಾನಿಯಾಗಿದ್ದಾರೆ. ವಿಷ್ಣುವಿನ ದಶಾವತಾರಗಳು ಭೂಮಿಯಲ್ಲಿನ ಜೀವಿಗಳ ಉಗಮದಂತೆ ವೈಜ್ಞಾನಿಕತೆಯಿಂದ ಕೂಡಿದೆ ಎಂದು ಹೇಳಿದರು.
ತುಮಕೂರು ವಿ.ವಿ. ನಿಲಯದ ಪ್ರೊ. ಸಿದ್ದಪ್ಪ ವಚನಗಾಯನ ನಡೆಸಿಕೊಟ್ಟರು. ಈ ಸತ್ಸಂಗ ಕೇಂದ್ರ ನೂತನ ಕಾರ್ಯದರ್ಶಿ ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಕುಲಪತಿಗಳನ್ನು ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯನವರು ಪರಿಚಯಿಸಿದರು. ಮಾಜಿ ಅಧ್ಯಕ್ಷ ಟಿ. ಮುರುಳಿಕೃಷ್ಣಪ್ಪ ನಿರೂಪಿಸಿ ವಂದಿಸಿದರು.