ಮನೆಮನೆಗಳಲ್ಲಿ ಪಾಕ್ಷಿಕ ಕವಿಕಾವ್ಯ ಗೋಷ್ಠಿ
ಹುಳಿಯಾರು: ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕವಿಕಾವ್ಯಗೋಷ್ಠಿಯ ಪಾಕ್ಷಿಕ ಕಾರ್ಯಕ್ರಮ ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನ ಉಪನ್ಯಾಸಕ ವಿ.ಹೆಚ್.ರೇವಣ್ಣ ಅವರ ನಿವಾಸದಲ್ಲಿ ಜರುಗಿತು.
ದಾಸಸಾಹಿತ್ಯ ಬೆಳೆದು ಬಂದದಾರಿ ಹಾಗೂ ಅಂದಿನ ಕಾಲದ ಶ್ರೇಷ್ಠ ಕೀರ್ತನಕಾರರು, ದಾರ್ಶನಿಕರು, ಕವಿಗಳು ಸೇರಿದಂತೆ ಕನಕದಾಸ, ಪುರಂದರದಾಸರಂತಹ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ, ಆದರ್ಶ ಗುಣಗಳು, ಅವರ ಚಿಂತನೆಗಳು, ಸಮಾಜದ ಬಗ್ಗೆ ಅವರ ನಿಲುವುಗಳನ್ನು ಕುರಿತಂತೆ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಟಿ.ಜಯಣ್ಣ ವಿಶೇಷ ಉಪನ್ಯಾಸ ನೀಡಿದರು.ಹೋಬಳಿ ಸಾಹಿತ್ಯ ಪರಿಷತ್ ತ.ಶಿ.ಬಸವಮೂರ್ತಿಯವರು ಕನಕದಾಸರ ಹರಿಭಕ್ತಸಾರದ ದೀನನಾನು ಸಮಸ್ತ ಲೋಕಕ್ಕೆ ದಾನಿ ನೀನು ಪದ್ಯವನ್ನು, ತಲ್ಲಣಿಸದಿರು ಕಂಡಯ್ಯ ತಾಳು ಮನವೇ ಎಂಬ ಕೀರ್ತನೆಯನ್ನು ಸ್ರುಶ್ರಾವ್ಯವಾಗಿ ಹಾಡಿದರು.
ಕಾತ್ರಿಕೆಹಾಳ್ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎ.ಎಸ್.ಲಕ್ಷ್ಮಯ್ಯ ಅಧ್ಯಕ್ಷತೆ ವಹಿಸಿದ್ದು, ಕುಮಾರಿ ರಶ್ಮಿ ಹಾಗೂ ಮಂಜುಳಾ ಪ್ರಾರ್ಥಿಸಿ, ರೇವಣ್ಣ ಸ್ವಾಗತಿಸಿ, ಶಿಕ್ಷಕ ದಯಾನಂದ್ ನಿರೂಪಿಸಿ, ಯಲ್ಲಪ್ಪ ವಂದಿಸಿದರು.