ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೃತ್ಯು ರಸ್ತೆ ದುರಸ್ಥಿಗೆ ಆಗ್ರಹ

Mainashree
Updated On : 27 Nov 2013, 11:24 am

ತುರುವೇಕೆರೆ: ತಾಲೂಕಿನ ಮೂಲಕ ಹಾದು ಹೋಗುವ ತುಮಕೂರು - ಮೈಸೂರು ರಸ್ತೆಯನ್ನು ಹಾಗೂ ಆ ದಾರಿಯಲ್ಲಿ ಬರುವ ಸೇತುವೆಗಳನ್ನು ಕೂಡಲೇ ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ನೆಮ್ಮದಿಯಿಂದ ಓಡಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಗಡಿ ಭಾಗವಾದ ವರಾಹಸಂದ್ರ ಸಾರ್ವಜನಿಕರು ಪ್ರತಿಭಟನೆ ಮಾಡಿದರು.
ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಗ್ರಾಮಾಂತರ ಪ್ರದೇಶದ ರಸ್ತೆಗಳನ್ನು ದುರಸ್ಥಿ ಮಾಡದೇ ನಿರ್ಲಕ್ಷಿಸಲಾಗಿದೆ. ಈ ರಸ್ತೆಗಳಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದೆ. ವಾಹನಗಳ ಬಿಡಿಭಾಗಗಳು ಬಿದ್ದು ಹೋಗುತ್ತಿವೆ. ಇತ್ತೀಚೆಗೆ ಸರ್ಕಾರಿ ಬಸ್ ರಸ್ತೆಯ ಮಗ್ಗುಲಿಗೆ ಬಿದ್ದು ಹತ್ತಾರು ಮಂದಿ ಗಾಯಾಳುಗಳಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿದ್ದಲಿಂಗೇಗೌಡ ಜಿಲ್ಲಾ ಕೇಂದ್ರಕ್ಕೆ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿವೆ. ಮೈಸೂರು ಕೇಂದ್ರಕ್ಕೆ ತುಮಕೂರಿನಿಂದ ಸಾಕಷ್ಟು ಬಸ್‌ಗಳ ಓಡಾಟವಿದೆ. ಈ ರಸ್ತೆಯಲ್ಲಿ ವಿಪರೀತ ಗುಂಡಿಗಳು ಇದ್ದು ಓಡಾಟವೇ ದುಸ್ತರವಾಗಿದೆ. ಈ ರಸ್ತೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಸೇರಿಸುವ ರೋಗಿಗಳನ್ನೂ ಸಹ ಕಳುಹಿಸಲಾಗುತ್ತದೆ. ಇಂತಹ ಕೆಟ್ಟ ರಸ್ತೆಯಲ್ಲಿ ವಾಹನಗಳು ಓಡಾಡಲು ಅಸಾಧ್ಯದ ಮಾತಾಗಿದೆ. ಅಲ್ಲದೇ ರಸ್ತೆಯ ಉದ್ದಕ್ಕೂ ನಿರ್ಮಿಸಿರುವ ಸೇತುವೆಗಳಿಗೆ ಸೂಕ್ತ ತಡೆಗೋಡೆಗಳು ಇಲ್ಲ. ಬೋಚಿಹಳ್ಳಿಯ ಸೇತುವೆ ಅಪಾಯಕ್ಕಾಗಿ ಕಾದುನಿಂತಿದೆ ಎಂಬಂತಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದಲಿಂಗೇಗೌಡ ಆಗ್ರಹಿಸಿದರು.
ಕಾಮಗಾರಿ ನಡೆದಿಲ್ಲ: ಈಗಾಗಲೇ ರಸ್ತೆಯ ವಾರ್ಷಿಕ ನಿರ್ವಹಣೆಗೆಂದು ಹಣ ಖರ್ಚು ಮಾಡಲಾಗಿದೆ. ಆದರೆ ಯಾವುದೇ ಕಾಮಗಾರಿ ನಡೆದಿಲ್ಲರುವುದು ಆಶ್ಚರ್ಯವೆನಿಸಿದೆ. ರಸ್ತೆಯ ಆಜೂ ಬಾಜು ಬೆಳೆದಿರುವ ಗಿಡ ಗಂಟೆಗಳನ್ನು ತೆರವು ಮಾಡದೇ ಇರುವುದರಿಂದ ರಸ್ತೆಯ ತಿರುವುಗಳಲ್ಲಿ ಮುಂದೆ ಬರುವ ವಾಹನಗಳನ್ನು ಗುರುತಿಸುವುದೇ ಕಷ್ಟದಾಯಕವಾಗಿದೆ. ಆದ್ದರಿಂದ ಕೂಡಲೇ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಬೇಕು ಎಂದು ಗ್ರಾಮದ ಮುಖಂಡರು ಸರ್ಕಾರವನ್ನು ಆಗ್ರಹಿಸಿದರು.
ಅಧಿಕಾರಿಗಳು ಬರಲಿ: ಸ್ಥಳಕ್ಕೆ ಅಧಿಕಾರಿಗಳು ಬಂದೇ ಬರಬೇಕು ಎಂದು ಪಟ್ಟು ಬಿಡಿದು ಪ್ರತಿಭಟನೆ ಮಾಡಿದ ಪರಿಣಾಮ ಸ್ಥಳಕ್ಕೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನ ಒಲಿಸಿದರು. ಇನ್ನು ಕೇವಲ 21 ದಿನಗದೊಳಗಾಗಿ ರಸ್ತೆಯ ದುರಸ್ಥಿ ಹಾಗೂ ಅಗಲೀಕರಣಕ್ಕಾಗಿ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗಿದೆ. ಕೆಲವೇ ತಿಂಗಳಲ್ಲಿ ರಸ್ತೆಯ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೇಳಿದರು. ಅಧಿಕಾರಿಗಳು ನೀಡಿದ ಭರವಸೆಯ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಪ್ರತಿಭಟನಾ ವೇಳೆ ಗ್ರಾಮದ ಮುಖಂಡರಾದ ಮೋಹನ್ ಕುಮಾರ್, ದರ್ಶನ್, ಗಂಗಾಧರ್, ಸಣ್ಣರಂಗಯ್ಯ, ಮಂಜುನಾಥ್ ಸೇರಿದಂತೆ ಆಯರಹಳ್ಳಿ, ಬೋಚೀಹಳ್ಳಿ, ಗೊರಾಘಟ್ಟ, ಸಿದ್ದನಹಟ್ಟಿ, ವರಾಹಸಂದ್ರ ಹಾಗೂ ಇನ್ನಿತರ ಹಳ್ಳಿಯ ಗ್ರಾಮಸ್ಥರು ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement