ಶೌಚಾಲಯ ನಿರ್ಮಾಣ ಪ್ರಗತಿ ಕುಂಠಿತ
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಸವ ವಸತಿ ಮತ್ತು ಇಂದಿರಾ ಆವಾಸ್ ಯೋಜನೆಗಳಿಂದ ನಿರ್ಮಿಸಿಕೊಂಡಿರುವ ಮನೆಗಳಿಗೆ ಅನುದಾನ ಬಿಡುಗಡೆ ಮಾಡದೆ ವಿಳಂಬ ದೋರಣೆ ಅನುಸರಿಸುತ್ತಿದ್ದು ಬಡವನ ಬದುಕಿನ ಜೊತೆ ಆಟ ಅಡುತ್ತಿದ್ದಾರ ಎಂದು ಅಧಿಕಾರಿಗಳನ್ನು ಶಾಸಕ ಬಿ. ಸುರೇಶ್‌ಗೌಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅವರು ಇಲ್ಲಿನ ಕೃಷಿ ಇಲಾಖೆ ಸಭಾಂಗಣದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಸವ ವಸತಿ ಮತ್ತು ಇಂದಿರಾ ಆವಾಸ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡವನ ಜೀವನದಲ್ಲಿ ಒಮ್ಮೆ ಮಾತ್ರ ಮನೆ ನಿರ್ಮಿಸಬಹುದು ಅದರಲ್ಲೂ ಕೂಡಾ ಸಾಲ ಸೋಲ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಯ ಜೊತೆ ಅಧಿಕಾರಿಗಳು ವಿಳಂಬ ಮಾಡಿ ಬಿಲ್ಲು ನೀಡದೆ ಇರುವುದನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು
ತುಮಕೂರು ಗ್ರಾಮಾಂತರದಲ್ಲಿ ಬಸವ ವಸತಿ ಯೋಜನೆಯಡಿ 10 ಸಾವಿರ ಮನೆಗಳು ನಮ್ಮ ಬಿಜೆಪಿ ಸರ್ಕಾರದಲ್ಲಿ ಮೂಂಜೂರಾಗಿ 3503 ಮನೆಗಳು ಪೂರ್ಣಗೊಂಡಿದ್ದು 3603 ಮನೆಗಳು ಪಾಯ ಹಂತದಲ್ಲಿದ್ದು 2005 ಮನೆಗಳು ಗೋಡೆ ಹಂತದಲ್ಲಿವೆ. ಹಾಗು 869 ಮನೆಗಳು ಚಾವಣಿ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ ಮತ್ತು 20 ಮನೆಗಳು ರದ್ದಾಗಿರುತ್ತವೆ. ಈ ರೀತಿಯಾಗಿ ಬಡವ ಹಂತ ಹಂತವಾಗಿ ಮನೆ ನಿರ್ಮಿಸಿಕೊಳ್ಳುತ್ತಿರುವಾಗ ಕಾಲಕಾಲಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿ ಮನೆ ನಿರ್ಮಿಸಿಕೊಳ್ಳಲು ಹಣ ಬಿಡುಗಡೆ ಮಾಡದೇ ಇರುವುದು ವಿಷಾದನೀಯ ಎಂದರು.
ಆಗ್ರಹ: ಸರ್ಕಾರದಲ್ಲಿ ಅನುದಾನ ಇಲ್ಲದೆ ವಿನಾಕಾರಣ ಸಬೂಬು ಏಳುತ್ತಿದ್ದಾರೆ. ಮತ್ತು ನೂರೆಂಟು ಬಾರಿ ಸಾಫ್ಟ್‌ವೇರ್ ಅನ್ನು ಬದಲಾವಣೆ ಮಾಡಿ ವಿಳಂಬ ಧೋರಣೆ ಅನುಸರಿಸುತ್ತಿದ್ದು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಇದನ್ನು ಸರಿಪಡಿಸಬೇಕು ಎಂದು ಶಾಸಕ ಬಿ. ಸುರೇಶ್ ಗೌಡರು ಆಗ್ರಹಿಸಿದರು.
ವಿಶ್ವ ಮಟ್ಟದಲ್ಲಿ ನಮ್ಮ ದೇಶದ ಬಯಲು ವಿಸರ್ಜನೆ ಬಗ್ಗೆ ಚರ್ಚೆ ನಡೆಯುತ್ತಿದ್ದು ಇದು ಅವಮಾನಕರ ಸಂಗತಿ. ಇದನ್ನು ದಯವಿಟ್ಟು ಎಲ್ಲರೂ ಕೂಡಾ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರು ಅಗ್ರಹಿಸಿದರು.
ಶೌಚಾಲಯಗಳ ನಿರ್ಮಾಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆಯಲ್ಲಿ ಇದ್ದರೂ ಕೂಡಾ ಶೌಚಾಲಯಗಳ ನಿರ್ಮಾಣದಲ್ಲಿ ಪ್ರಗತಿ ಕುಂಟಿತಗೊಂಡಿರುವುದು ಆಂತಕಕಾರಿ ವಿಷಯ. ಎಲ್ಲ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಪಂಚಾಯ್ತಿ ಸದಸ್ಯರು ಸೇರಿಕೊಂಡು ಶೌಚಾಲಯಗಳ ನಿರ್ಮಾಣಕ್ಕಾಗಿ ವಾರದಲ್ಲಿ ಒಂದೆರಡು ದಿನ ಮೀಸಲಿಟ್ಟು ಕರ್ತವ್ಯ ನಿರ್ವಹಿಸುವಂತೆ ತಾಖೀತು ಮಾಡಿದರು
ಸಭೆಯಲ್ಲಿ ಜಯಮ್ಮ ತಿಮ್ಮಪ್ಪ, ಶಿವಕುಮಾರ್, ಎಂ.ಸಿ. ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.