ರೈತ ಆತ್ಮಹತ್ಯೆ; ಸಿಎಂ ಪ್ರತಿಕೃತಿ ದಹನ
ಕನ್ನಡಪ್ರಭ ವಾರ್ತೆ ತುಮಕೂರು ನ.28
ಕಬ್ಬು ಬೆಳಗಾರ ವಿಠಲ ಅರಭಾವಿ ಆತ್ಮಹತ್ಯೆಗೆ ಶರಣರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಕೆಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಆಗ್ರಹಿಸಿದ್ದಾರೆ.
ಅವರು ಕರ್ನಾಟಕ ಜನತಾ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ದ ನಡೆಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ದರ್ಪದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯದ ಜನತೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಧರಣಿ ನಿರತ ಕಬ್ಬು ಬೆಳಗಾರರನ್ನು ಮಾತನಾಡಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರೆ ಅಮಾಯಕ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.
ಸಿದ್ದು ಏನು ಮಾಡಲು ಹೊರಟಿದ್ದಾರೆ: ಒಂದು ಕೋಮಿನವರಿಗೆ ಮದುವೆ ಮಾಡಿಸಲು, ಬಡ ಮಧ್ಯಮ ವರ್ಗದವರ ಮೇಲೆ ಬರೆ ಎಳೆಯಲು, ಒಂದು ವರ್ಗದವರಿಗೆ ಪ್ರವಾಸ ಮಾಡಿಸಲು, ಅಸ್ತಿಕರ ಧಾರ್ಮಿಕ ನಂಬಿಕೆಗಳ ಮೇಲೆ ನಿಷೇಧ ಹೇರುವ ಸಂವಿಧಾನ ಬಾಹಿರ ಚಟುವಟಿಕೆಗಳನ್ನು ಮಾಡುವ ಬದಲು ಬರ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಅರಿತು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಸಿದ್ದರಾಮಯ್ಯ ಕಲಿಯಲಿ ಎಂದಿದ್ದಾರೆ.
ಆಡಳಿತ ಪಕ್ಷದ ಶಾಸಕರು ಸಹ ರಕ್ಷಣೆಗೆ ಬಾರದ ರೀತಿ ಜನ ವಿರೋಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದನ್ನು ಕೈಬಿಡಿ, ಪ್ರಜಾಪ್ರಭುತ್ವದ ಅಶಯದಂತೆ ಸಮಾನತೆಯ ಆಡಳಿತ ನೀಡುವುದನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗೆ ಕಲಿಸಬೇಕು. ಅಕ್ರಮ ಗಣಿಗಾರಿಕೆ ವಿರುದ್ದ ಪಾದಯಾತ್ರೆ ಎಂದು ನಾಟಕವಾಡಿದ ನೀವು ವಿಪಕ್ಷಗಳಿಗೆ ಹೆದರಿ ನಿಮ್ಮ ಸರ್ಕಾರದ ಮಂತ್ರಿಯ ಬಳಿ ರಾಜಿನಾಮೆ ಕೊಡಿಸಿದ್ದೀರ ಎಂದಿದ್ದಾರೆ.
ದುರ್ಬಲ ಮುಖ್ಯಮಂತ್ರಿ: ಕರ್ನಾಟಕ ರಾಜ್ಯ ಕಂಡಂತಹ ದುರ್ಬಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಪಕ್ಷೀಯರಿಂದಲೇ ವಿರೋಧ ಎದರಿಸುತ್ತಿದ್ದಾರೆ, ಲೋಕಸಭೆಯ ಚುನಾವಣೆಗೆ ಮುಂಚೆಯೇ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ನಗರದ ಟೌನ್ಹಾಲ್ ಎದುರು ಮಾನವ ಸರಪಳಿ ರಚಿಸಿದ ನೂರಾರು ಕೆಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್, ರಂಗನಾಯ್ಕ, ಧನಿಯಕುಮಾರ್, ಹನುಮಂತರಾಜು, ವಿಷ್ಣು, ವಿರೂಪಾಕ್ಷ, ಶಂಕರ್, ನಂದಿನಾಥ್, ನಗರಸಭಾ ಸದಸ್ಯ ಕರುಣರಾಧ್ಯ, ಇಂದ್ರಕುಮಾರ್, ವಿಜಯ ರುದ್ರೇಶ್, ಮಂಜುಳ ನಿರಂಜನ್, ಮಹಿಳಾ ಘಟಕದ ಕಮಲಮ್ಮ, ರಾಧಮ್ಮ, ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.