ಸರ್ಕಾರದ ಧೋರಣೆಗೆ ರೈತ ಬಲಿ: ಸಂಘಟನೆಗಳ ಆಕ್ರೋಶ
ಕನ್ನಡಪ್ರಭ ವಾರ್ತೆ ತುಮಕೂರು ನ.28
ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಕಾಲಿಕ ಮಧ್ಯಪ್ರವೇಶ ಮಾಡದೆ ನಿರ್ಲಕ್ಷ್ಯ ತೋರಿದ್ದರಿಂದಲೇ ಕಬ್ಬು ಬೆಳೆಗಾರ ರೈತ ಆತ್ಮಹತ್ಯೆಗೆ ಕಾರಣ ಎಂದು ಆಪಾದಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಕೆ.ಪಿ.ಆರ್.ಎಸ್ ಹಾಗೂ ಸಿಐಟಿಯು ಜಿಲ್ಲಾ ಸಮಿತಿಗಳು ಜಂಟಿಯಾಗಿ ಪುರಭವನದ ಬಳಿ ಪ್ರತಿಭಟನೆ ನಡೆಸಿದವು.
ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿದು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಪಾದಿಸಿದ ಪ್ರತಿಭಟನಾಕಾರರು, ಕ್ವಿಂಟಾಲ್ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ರು.3150 ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.
ಯಾರ ಹಿತಕ್ಕಾಗಿ?: ಕೆಪಿಆರ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಮಾತನಾಡಿ, ದೇಶದಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ ಸಕ್ಕರೆ ಕಾರ್ಖಾನೆಗಳಲ್ಲಿ ಟನ್ಗಟ್ಟಲೆ ದಾಸ್ತಾನು ಇರುವಾಗಲೇ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ಯಾರ ಹಿತಕ್ಕಾಗಿ ಎಂದು ಪ್ರಶ್ನಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪ, ಸಹ ಸಂಚಾಲಕ ನೌಶಾದ್ ಸೆಹಗನ್, ಬಿ.ಉಮೇಶ್ ಮತ್ತಿತರರು ಮಾತನಾಡಿದರು.
ಸಿಪಿಐಎಂ. ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಕೊರಟಗೆರೆ ತಾಲೂಕು ಕೆಪಿಆರ್.ಎಸ್. ಅಧ್ಯಕ್ಷ ವೀರಭದ್ರಪ್ಪ, ಚಿ.ನಾ.ಹಳ್ಳಿ ತಾಲೂಕಿನ ಹನುಮಂತರಾಜು, ತಿಪಟೂರು ತಾಲೂಕು ಭಾಷೂ, ವರದರಾಜು ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.