ಇಂದು ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆ
ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಗುರುಗದಹಳ್ಳಿ, ಮತ್ತಿಹಳ್ಳಿ, ಚಿಕ್ಕಬಿದರೆ ಗ್ರಾಮಗಳ ಕೆರೆಗಳಿಗೆ ಹೊನ್ನವಳ್ಳಿ ಏತನೀರಾವರಿ ಮೂಲಕ ನೀರು ಹರಿಸಲು ಒತ್ತಾಯಿಸಿ ಶುಕ್ರವಾರ ಬೆಳಿಗ್ಗೆ 11ಗಂಟೆಗೆ ನಗರದ ಹಾಸನ ವೃತ್ತದಲ್ಲಿ ರಸ್ತೆ ತಡೆ ಕಾರ್ಯಕ್ರಮವನ್ನು ಸುತ್ತಮುತ್ತಲಿನ ರೈತ ಬಾಂಧವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಲವಾರು ತಿಂಗಳಿಂದ ಈ ಗ್ರಾಮದ ಕೆರೆಗಳಿಗೆ ಹೊನ್ನವಳ್ಳಿ ಏತನೀರಾವರಿ ವತಿಯಿಂದ ನೀರು ಹರಿಸದೆ ಜನ ಜಾನುವಾರುಗಳಿಗೆ, ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರಿಲ್ಲದೆ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಇತ್ತ ಮಳೆಯೂ ಇಲ್ಲದೆ ಕೆರೆಯಲ್ಲಿ ನೀರು ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿದ್ದು, ಗೊರೂರು ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಕೂಡಲೆ ಈ ಕೆರೆಗಳಿಗೆ ನೀರು ಹರಿಸಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸುವ ಮೂಲಕ ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರೈತಬಾಂಧವರು ಪಾಲ್ಗೊಂಡು ಈ ಹೋರಾಟ ಯಶಸ್ವಿಗೊಳಿಸಬೇಕೆಂದು ರೈತ ಮುಖಂಡರು ಮನವಿ ಮಾಡಿದ್ದಾರೆ.