ಬೇಸಾಯ ಬೇಡ ಎಂಬುದು ದೂರವಾಗಲಿ
ತುಮಕೂರು: ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ, ಕೇವಲ ಖರ್ಚಿನ ಕೆಲಸವಷ್ಟೆ ಎಂಬ ಅವ್ಯಕ್ತ ಭಯದಿಂದಾಗಿ ಕೃಷಿಕರ ಸಂಖ್ಯೆ ಇಳಿಮುಖವಾಗುವುದರ ಜೊತೆಯಲ್ಲಿ ಕೃಷಿ ಭೂಮಿಯ ವಿಸ್ತೀರ್ಣವೂ ಸಹ ಕಡಿಮೆಯಾಗಿ ಬೀಳು ಭೂಮಿಗಳು ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿಯೆಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರಾಜು ಅಭಿಪ್ರಾಯಪಟ್ಟರು.
ಕೃಷಿ ತಂತ್ರಜ್ಞರ ಸಂಸ್ಥೆ ತುಮಕೂರು ಘಟಕ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಮತ್ತು ಇತರೆ ಇಲಾಖೆಗಳ ಸಹಯೋಗದೊಂದಿಗೆ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನದಾತನಾಗಲಿ ಎಂದು ಆಶಿಸುತ್ತಿಲ್ಲ: ಕೆಲವು ದಶಕಗಳ ಹಿಂದೆ ಹಿರಿಯರು ಬೇಸಾಯ ಮಾಡಲೆಂದೇ ಮಕ್ಕಳನ್ನು ಪ್ರೇರೇಪಿಸಿ, ಒಕ್ಕಲುತನದತ್ತ ಮನಸ್ಸು ಮಾಡುವಂತೆ ತನ್ಮೂಲಕ ಕುಟುಂಬದ ನಿರ್ವಹಣೆಗೆ ಕೃಷಿಯನ್ನು ಅವಲಂಬಿಸಲು ಪ್ರೇರಣಾ ಶಕ್ತಿಯಾಗಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಪೋಷಕರು ತಮ್ಮ ಮಕ್ಕಳು ರೈತರಾಗಲಿ ಎಂದು ಕನಸಿನಲ್ಲೂ ಹಂಬಲಿಸದ ಕಾಲ ಬಂದಿದೆ ಇದಕ್ಕೆ ಎಷ್ಟು ಕಾರಣಗಳಿದ್ದರೂ ಮಳೆಯ ಅನಿಶ್ಚಿತತೆ, ಹವಾಮಾನ ವೈಪರೀತ್ಯ ರಾಸಾಯನಿಕಗಳ ಬಳಕೆ, ಹೆಚ್ಚಿನ ಬಂಡವಾಳ ಹೂಡಿಕೆ, ಕೂಲಿ ಕಾರ್ಮಿಕರ ಕೊರತೆಯಂತಹ ಜ್ವಲಂತ ಸಮಸ್ಯೆಗಳು ಕೃಷಿಯನ್ನು ಇನ್ನಿಲ್ಲದಂತೆ ಕಾಡಿ ಬೇಸಾಯ ಸಾಕು ಸಾಕೆನ್ನುವ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದರು.
ಎಲ್ಲೆಲ್ಲೂ ಬೀಳು ಭೂಮಿ: ಇತ್ತೀಚೆಗೆ ಆಹಾರ ಧಾನ್ಯಗಳನ್ನು ಬೆಳೆಯುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ, ಸಾಂಪ್ರಾದಾಯಿಕ ಆಹಾರ ಪದ್ದತಿಗಳು ಉತ್ತಮ ಆರೋಗ್ಯಕ್ಕೆ ಪೂರಕವಾಗಿದ್ದು, ಹಿರಿಯರು ಸದೃಢರಾಗಿ ಆರೋಗ್ಯವಂತರಾಗಿ ಹೆಚ್ಚು ದಿನ ಬದುಕುವ ಪರಿಪಾಟ ಈಗ ಕಂಡು ಬರುತ್ತಿಲ್ಲ. ಆದ್ದರಿಂದ ಹಿಂದಿನ ದಿನಗಳಲ್ಲಿ ಬೆಳೆಯುತ್ತಿದ್ದ ಕೊರಲೆ, ಸಾಮೆ, ನವಣೆ, ಆರ್ಕ, ಸಜ್ಜೆಯಂತಹ ಬರ ಸಹಿಷ್ಣು ಕಿರು ಧಾನ್ಯಗಳಿಗೆ ಮರು ಜೀವ ನೀಡಿ, ಉತ್ತಮ ಅಭ್ಯಾಸದ ಜೊತೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸಿ ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು.
ಕೃಷಿಕರಿಗೆ ಸಲಹೆ: ಇದೇ ಸಂದರ್ಭದಲ್ಲಿ ನೈಸರ್ಗಿಕ ಆಹಾರ ತಜ್ಞ ಜಿ.ವಿ.ವಿ. ಶಾಸ್ತ್ರಿ ಯವರು ನೈಸರ್ಗಿಕ ಆಹಾರಗಳ ಬಳಕೆ, ಆರೋಗ್ಯಕರ ಆಹಾರ ಪದ್ಧತಿ, ಪಂಚಭೂತಗಳೊಂದಿಗೆ ಆರೋಗ್ಯದ ಸಮೀಕರಣ ಹಾಗೂ ಉತ್ತಮ ಹವ್ಯಾಸಗಳ ಮೂಲಕ ಸುಸ್ಥಿರ ಮತ್ತು ಸುಖ ಜೀವನ ನಡೆಸಲು ಹಲವಾರು ಉತ್ತಮ ಸಲಹೆಗಳನ್ನು ನೀಡಿದರು.
ಆಹಾರ ಧಾನ್ಯಗಳ ಸ್ಥಿತಿಗತಿ: ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ. ಆರ್.ಪಿ. ರಾಮಯ್ಯ ಮಾತನಾಡಿ, ವಿಶ್ವ ಮಟ್ಟದಲ್ಲಿ ಆಹಾರದ ಉತ್ಪಾದನೆ, ಭಾರತದಲ್ಲಿ ಆಹಾರ ಧಾನ್ಯಗಳ ಸ್ಥಿತಿಗತಿ, ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಪೌಷ್ಟಿಕತೆ, ಆಹಾರದ ಲಭ್ಯತೆ ಮುಂತಾದ ವಿಷಯಗಳ ಬಗ್ಗೆ ಅಂಕಿ ಅಂಶಗಳ ಸಮೇತ ಮಾಹಿತಿ ನೀಡುತ್ತಾ ಆಹಾರ ಪೋಲಾಗುವಿಕೆಯ ಬಗ್ಗೆ ಮಾಹಿತಿ ನೀಡಿ ಮನದಟ್ಟು ಮಾಡಿಕೊಟ್ಟರು.
ಅಲ್ಲದೆ, ಹಸಿವಿನಿಂದ ಬಳಲುತ್ತಿರುವ ಹಲವಾರು ದೇಶಗಳ ಸಮುದಾಯಗಳಿಗೆ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ವತಿಯಿಂದ ಸದರಿ ವರ್ಷದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮ ಕುರಿತು ವಿವರ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಡಾ. ಅನೂಪ್, ಉಪ ಕಾರ್ಯದರ್ಶಿ ಕೃಷ್ಣಪ್ಪ, ಹನುಮನರಸಯ್ಯ, ಸಹಾಯಕ ಕೃಷಿ ನಿರ್ದೇಶಕ ಡಾ.ಲಕ್ಷ್ಮಣ್, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸುಜಿತ್, ಡಾ.ರಾಧಾ ಬಣಕಾರ್, ಡಾ.ಬಿ.ಪಿ.ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು. ಭಾಗ್ಯಶ್ರೀ ಪ್ರಾರ್ಥಿಸಿ, ಡಾ. ಚಂದ್ರ ಕುಮಾರ್ ಸ್ವಾಗತಿಸಿ, ಡಾ. ಲಕ್ಷ್ಮಣ್ ವಂದಿಸಿ, ಗಿರಿಜಾ ನಿರೂಪಿಸಿದರು.