ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ವಿಡಂಬನ ಸಾಹಿತ್ಯದಿಂದ ಸಮಾಜ ಶುದ್ಧಿ'

Rashmi Kasaragodu
Updated On : 30 Nov 2013, 12:21 pm

ತುಮಕೂರು: ವಿಡಂಬನ ಸಾಹಿತ್ಯದಿಂದ ಸಮಾಜ ಶುದ್ದಿ ಸಾಧ್ಯ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಅವರು ತುಮಕೂರು ಸಮೀಪದ ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಕೀರ್ತಿಶೇಷ ಕೆ.ಸಿ. ಚೌಡಪ್ಪರೆಡ್ಡಿ ವಿರಚಿತ, ಕವಿತಾಕೃಷ್ಣ ಸಂಪಾದಿತ  ಕುರಿರಾಜ್ಯ ಮಾರ್ಗ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಅಳು ಹೇಗೋ ಹಾಗೆಯೇ ನಗು ಕೂಡ. ಹಾಸ್ಯ ಲೇಪಿತ ವಿಡಂಬನ ಸಾಹಿತ್ಯದಿಂದ ಸಮಾಜ ಶುದ್ದಿ ಸಾಧ್ಯ. ಮಲಿನಗೊಂಡ ಮನೆ-ಮನಗಳನ್ನು ವಿಡಂಬನಕಾರ ಪರಿಣಾಮಕಾರಿಯಾಗಿ ಪರಿಶುದ್ದಗೊಳಿಸಬಲ್ಲನು. ಕೆ.ಸಿ. ಚೌಡಪ್ಪಶೆಟ್ಟಿ ಬರಹ ಹರಿತ ಹಾಗೂ ನಗೆಯ ಚಾಟಿಯಿಂದ ರಾಜಕೀಯ ರಂಗವನ್ನು ಪರಿಣಾನಕಾರಿಯಾಗಿ ವಿಡಂಬಿಸಿದವರು. ಅವರೊಬ್ಬ ಸಮರ್ಥ ಸಾಹಿತಿಗಳಾಗಿದ್ದರು. ಆದರೆ ತುಮಕೂರು ಜಿಲ್ಲಾ ಸಾಹಿತ್ಯ ಲೋಕ ಅವರನ್ನು ಮರೆತದ್ದು ವಿಷಾದನೀಯ ಸಂಗತಿ ಎಂದು ಕವಿತಾ ಕೃಷ್ಣ ಅಭಿಪ್ರಾಯಪಟ್ಟರು.
ಕವಿ ಜಿ.ಕೆ. ಕುಲಕರ್ಣಿ ಮಾತನಾಡಿ, ನವರಸಗಳಲ್ಲಿ ಹಾಸ್ಯ ರಸ ತುಂಬಾ ಪ್ರಿಯವಾದುದು. ಜನತೆ ಹಾಸ್ಯಾರಾಧನೆ ಮಾಡುವ ಮೂಲಕ ತಮ್ಮ ರೋಗಗಳನ್ನು ಪರಿಣಾಮಕಾರಿಯಾಗಿ ವಾಸಿ ಮಾಡಿಕೊಳ್ಳಬಹುದು ಎಂದರು. ಕೃತಿ ಕುರಿತು ಮಾತನಾಡಿದ ಸಂಸ್ಕೃತ ವಿದ್ವಾಂಸ ಗೌ.ತಿ. ವೆಂಕಟಾಚಲ, ಕಾಲಧರ್ಮದ ಸಹಜ  ಸಂಗತಿಗಳನ್ನು ವಿಡಂಬನಾ ಲೇಖನಗಳ ಮೂಲಕ ಚೌಡಪ್ಪಶೆಟ್ಟಿ , ನಗೆಚಾಟಿ ಬೀಸಿ ನಗಿಸಿದ್ದಾರೆ. ಜತೆಗೆ ಎಚ್ಚರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇದೊಂದು ಅಪೂರ್ವ ವಿಡಂಬನ ಕೃತಿ. ಅಳಿದ ಸಾಹಿತಿಯ ಮಹತ್ವದ ಲೇಖನಗಳನ್ನು ಸಂಪಾದಿಸಿ, ಕವಿತಾಕೃಷ್ಣ ಮಹತ್ವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಹಾಸ್ಯ ಸಾಹಿತಿ ಗೌಡನಕಟ್ಟೆ ತಿಮ್ಮಯ್ಯ ಮಾತನಾಡಿ, ನಗೆಮಲ್ಲಿಗೆ 33 ವರ್ಷಗಳ ಕಾಲ ಹಾಸ್ಯರಾಧನೆ ಮಾಡುತ್ತಾ ಬಂದ ಅಪೂರ್ವ ಸಂಸ್ಥೆಯಾಗಿದೆ ಎಂದರು. ಕೋಳಾಲ ಜಯಣ್ಣ, ಸಾಹಿತಿ ಕೆ.ಸಿ.ಬಸಪ್ಪ ಮತ್ತಿತರರು ಮಾತನಾಡಿದರು. ಕವಯತ್ರಿ ಉಮಾಶರ್ಮ ಪ್ರಾರ್ಥಿಸಿ, ಸಿದ್ದಾಪುರ ಕೆ. ನರಸಿಂಹಯ್ಯ ಸ್ವಾಗತಿಸಿ, ಗೌ.ತಿ. ರಂಗನಾಥ ವಂದಿಸಿದರು. ಮಧುಗಿರಿ ಜಯರಾಂ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement