ವೈಶ್ಯ ಸಮಾಜದಿಂದ ಸದೃಢ ಸಮಾಜಕ್ಕೆ ಶ್ರಮ
ಮಧುಗಿರಿ: ವೈಶ್ಯ ಸಮಾಜದ ಬಂಧುಗಳು ಬುದ್ಧಿವಂತರು. ಬೇರೆಯವರ ಆಸ್ತಿಗೆ ಆಸೆ ಪಡದೇ ಕಷ್ಟಪಟ್ಟು ದುಡಿದು ವ್ಯವಹಾರ ನಡೆಸಿ ನಂಬಿಕೆಗೆ ಅರ್ಹರಾಗಿ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಾರೆ ಎಂದು ಶಾಸಕ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.
ಶುಕ್ರವಾರ ಮಧುಗಿರಿ ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಏರ್ಪಟಾಗಿದ್ದ ಶ್ರೀವಾಸವಿ ವಿವಿಧೋದ್ದೇಶ ಸಹಕಾರ ಸಂಘದಡಿ ನೂತನ ಬ್ಯಾಂಕಿಂಗ್ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ವೈಶ್ಯ ಸಮಾಜದ ಬಂಧುಗಳಲ್ಲಿ ಸಣ್ಣತನ, ಅಸೂಯೆ, ಕೆಟ್ಟ ಯೋಚನೆಯಿಲ್ಲದೆ ತಮ್ಮ ಪಾಡಿಗೆ ತಾವು ಶ್ರಮ ವಹಿಸಿ ವ್ಯವಹಾರ ನಡೆಸುವ ಮೂಲಕ ನಂಬಿಕೆಗೆ ಅರ್ಹರಾದವರು. ವೈಶ್ಯ ಸಮಾಜ ಕಷ್ಟ ಪಟ್ಟು ಹಂತ ಹಂತವಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದ ರಾಜಣ್ಣ, ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ಸಹಕಾರಿ ತತ್ವದಡಿ ಸಮಾಜದ ಹಿರಿಯರು ಶ್ರೀವಾಸವಿ ವಿವಿಧೋದ್ದೇಶ ಸಂಘ ಸ್ಥಾಪಿಸಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿ ಎಂಬ ದೂರ ದೃಷ್ಟಿಯಿಂದ ಈ ಸಂಘದ ತತ್ವ ಒಂದಕ್ಕೆ ಸೀಮಿತವಾಗದೇ ಬ್ಯಾಂಕಿಂಗ್ ವ್ಯವಸ್ಥೆಗೆ ವಿವಿಧೋದ್ದೇಶ ಎಂಬ ಹೆಸರಿಟ್ಟು ಸಮಾಜ ಸೇವೆಗೆ ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಬಾಂಕಿಂಗ್ ವ್ಯವಸ್ಥೆ ನಡೆಯುತ್ತಿರುವುದೇ ನಂಬಿಕೆ ಆಧಾರದ ಮೇಲೆ. ಇದರಲ್ಲಿ ನಂಬಿಕೆಗೆ ದ್ರೋಹ ಆಗಬಾರದು. ಆ ಮೂಲಕ ಉತ್ತಮ ಸೇವೆಗೆ ಹತ್ತು ಹಲವು ಸೇವಾ ಕಾರ್ಯ ಕೈಗೊಳ್ಳಲು ಸಂಘ ಸಹಕಾರಿಯಾಗಿದೆ ಎಂದರು.
ಹೆಚ್ಚಿನ ಜವಾಬ್ದಾರಿ: ಸಂಘ-ಸಂಸ್ಥೆಗಳು ಏಳಿಗೆ ಹೊಂದಬೇಕಾದರೆ ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತದೆ. ಅಳಿವು-ಉಳಿವು ಸಿಬ್ಬಂದಿ ಕೈಲಿರುತ್ತದೆ. ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸದಸ್ಯರ ನಿರೀಕ್ಷೆಗೆ ಮತ್ತು ಗ್ರಾಹಕರಿಗೆ ತಕ್ಕಂತೆ ಸ್ಪಂದಿಸಿ ಪ್ರಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಬ್ಯಾಂಕಿನ ಪ್ರಗತಿ ಖಚಿತ ಎಂದು ರಾಜಣ್ಣ ಹೇಳಿದರು.
ಆ ನಿಟ್ಟಿನಲ್ಲಿ ಈ ಬ್ಯಾಂಕು ಉತ್ತಮವಾಗಿ ಬೆಳೆದು ಆರ್ಥಿಕವಾಗಿ ಸದೃಢವಾಗಲಿ ಎಂದು ಶುಭ ಕೋರಿದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ಸಿಇಓ ಶ್ರೀಪತಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ತಾತಾರಾಮಲಿಂಗಾ ಶೆಟ್ಟಿ, ಡಿ.ಜಿ.ಶಂಕರನಾರಾಯಣ ಶೆಟ್ಟಿ, ತಿಪ್ಪೇಸ್ವಾಮಿ ಮಾತನಾಡಿದರು.
ಸಂಘದ ಅಧ್ಯಕ್ಷ ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ,ಚಂದ್ರಶೇಖರಗೌಡ, ಬ್ಯಾಂಕಿನ ಉಪಾಧ್ಯಕ್ಷ ಎ.ರಮೇಶ್, ಸದಸ್ಯರಾದ ಎಂ.ಕೆ.ನಾಗಾರಜು, ಕೆ.ಎನ್. ಆದಿಶೇಷ, ಪಾರ್ಥಸಾರಥಿ, ವೆಂಕಟಾಚಲಪತಿ, ಕೆ.ವಿ. ರವಿಶಂಕರ್, ಎಂ.ಎಸ್. ರಘನಾಥ್, ಕೆ.ಎಂ. ವಿಕ್ರಂ, ಜಿ.ವಿ. ನಂದಿತಾ ವೆಂಕಟೇಶ್, ಅನುಷ ಬದರಿನಾಥ್ ಮೊದಲಾದವರು ಉಪಸ್ಥಿತರಿದ್ದರು. ವಿಕ್ರಂ ಸ್ವಾಗತಿಸಿ ವೆಂಕಟೇಶ್ ವಂದಿಸಿದರು.