ಅಧಿಕಾರಿಗಳ ನಿರ್ಲಕ್ಷ್ಯ: ತಾಪಂ ಸಾಮಾನ್ಯ ಸಭೆ ಮುಂದಕ್ಕೆ
ತಿಪಟೂರು: ತಾಲೂಕಿನ ಯಾವುದೇ ಇಲಾಖೆಗಳ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿಗಳನ್ನು ಒದಗಿಸದಿರುವುದರಿಂದ ಸಾಮಾನ್ಯ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಸದಸ್ಯರ ಹಾಗೂ ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ ಎಂದು ತಾ.ಪಂ.ಸದಸ್ಯ ರವಿ ಸೇರಿದಂತೆ ತಾ.ಪಂ. ಸದಸ್ಯರು ಇಓ ಸೇರಿದಂತೆ ಇಲಾಖೆ ಮುಖ್ಯಸ್ಥರ ವಿರುದ್ಧ ಕಿಡಿಕಾರಿದರು.
ನಗರದ ತಾ.ಪಂ.ಸಭಾಂಗಣದಲ್ಲಿ ಎನ್.ಭಾನುಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ನಾನಾ ಇಲಾಖೆಗಳ ಪ್ರಗತಿ ವರದಿ ಮಾಹಿತಿ ನೀಡದ ಹಿನ್ನಲೆಯಲ್ಲಿ ಸದಸ್ಯ ರವಿ ಮುಖಂಡತ್ವದಲ್ಲಿ ಕೆಲ ಸದಸ್ಯರು ಅಧಿಕಾರಿಗಳ ಸುಳ್ಳು ಪ್ರಗತಿ ವಿಚಾರಗಳನ್ನು ಆಲಿಸಲು ಇಲ್ಲಿಗೆ ಬರಬೇಕಾ. ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ನಡಾವಳಿ ಬರೆದಿಲ್ಲ. ಸರ್ಕಾರಕ್ಕೆ ಸುಳ್ಳು ಅಂಕಿ ಅಂಶ ನೀಡಲು ಮಾತ್ರ
ತಾ.ಪಂ.ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಾಮಾನ್ಯ ಸಭೆಗೆ ತಾಲೂಕಿನ ನಾನಾ ಇಲಾಖೆಗಳ ಬೆರಳೆಣಿಕೆಯಷ್ಟು ಅಧಿಕಾರಿಗಳ ಹಾಜರಿ ಮಾತ್ರ ಇದೆ. ತಾ.ಪಂ.ಸಭೆಗೆ ಬೆಲೆ ಇಲ್ಲವೇ ಇಲಾಖೆಗಳ ಕೆಲಸಗಳ ಬಗ್ಗೆ
ಸದಸ್ಯರಿಗೆ ಮಾಹಿತಿ ಇಲ್ಲದಿದ್ದರೆ ನಮ್ಮ ಕ್ಷೇತ್ರಗಳ ಜನರಿಗೆ ಏನು ಉತ್ತರಿಸಬೇಕೆಂದು ಅಧಿಕಾರಿ ವರ್ಗವನ್ನು ಬಹುತೇಕ ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು.
ಅವಮಾನಿಸಲಾಗುತ್ತಿದೆ: ತಾಲೂಕಿನ ಪ್ರಮುಖ ಸಮಾರಂಭಗಳು ಮತ್ತು ಕಾಮಗಾರಿ ಗುದ್ದಲಿ ಪೂಜೆಯಂತಹ ಕಾರ್ಯಕ್ರಮಗಳಿಗೆ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಆಯಾ ಕ್ಷೇತ್ರದ ಸದಸ್ಯರನ್ನು ಕರೆಯದೆ ಅವಮಾನಿಸಲಾಗುತ್ತಿದೆ. ಇದರಿಂದ ಸಾರ್ವಜನಿಕವಾಗಿ ಸದಸ್ಯರಿಗೆ ಅಗೌರವ ಉಂಟಾಗುತ್ತಿದೆ. ಅಧಿಕಾರಿಗಳು ರಾಜಕೀಯ ಮಾಡುವುದುನ್ನು ಬಿಟ್ಟು ಸಾರ್ವಜನಿಕ ಕೆಲಸ ಮಾಡಬೇಕಾಗಿದೆ. ಇದನ್ನೇ ಮುಂದುವರೆಸಿದರೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಎನ್.ಭಾನುಪ್ರಕಾಶ್ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ ಅವರನ್ನ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಕೆಲ ಮಹಿಳಾ ಸದಸ್ಯರು ಧ್ವನಿಗೂಡಿಸಿದರು. ಉತ್ತರಿಸಿದ ಬಿಇಓ, ಶಾಸಕರು ಬೆಳಗಾವಿ ಅಧಿವೇಶನಕ್ಕೆ ತುರ್ತ ತೆರಳುವ ಹಿನ್ನಲೆಯಲ್ಲಿ ಒಂದು ಕಾರ್ಯಕ್ರಮವನ್ನು ತಿಳಿಸಲಾಗಿಲ್ಲ. ಮುಂದೆ ಎಚ್ಚರವಹಿಸುತ್ತೇವೆ ಎಂದು ಸಭೆಯಲ್ಲಿ ಕ್ಷಮೆ ಕೋರಿದರು. ಸಾಕಷ್ಟು ಇಲಾಖೆಗಳ ಮುಖ್ಯ ಅಧಿಕಾರಿಗಳು ಗೈರು ಹಾಜರಿ ಎದ್ದು ಕಾಣುತ್ತಿತ್ತು. ಇ.ಓ ಅವರು ಇಲಾಖೆಗಳ ಪ್ರಗತಿ ವರದಿ, ಕಳೆದ ಸಾಮಾನ್ಯ ಸಭೆಯ ವರದಿ ನೀಡದ ಹಿನ್ನಲೆಯಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿಸಿದ್ದಾರೆ ಎಂದು ತಾ.ಪಂ.ಅಧ್ಯಕ್ಷ ಭಾನುಪ್ರಕಾಶ್ ಸದಸ್ಯರ ಒಪ್ಪಿಗೆಯೊಂದಿಗೆ ಖುದ್ದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಸಾಮಾನ್ಯ ಸಭೆಗೆ ಹಾಜರಾಗಿ ತಾ.ಪಂ.ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ಧರಿಸಿ ಸಾಮಾನ್ಯ ಸಭೆಯನ್ನು ಡಿ.9ಕ್ಕೆ ಮುಂದೂಡಲಾಯಿತು. ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷ ರಾಜು, ಸ್ಥಾಯಿಸಮಿತಿ ಅಧ್ಯಕ್ಷೆ ನೇತ್ರಾವತಿ, ತಹಸೀಲ್ದಾರ್ ಮಂಜುನಾಥ್, ಪ್ರಭಾರಿ ಇಓ ಜಯಪ್ಪ ಮತ್ತಿತರರಿದ್ದರು.