ಜಿಲ್ಲೆಯಲ್ಲಿ ಹೆಚ್ಐವಿ ಕುರಿತು ವ್ಯಾಪಕ ಪ್ರಚಾರ
ತುಮಕೂರು: ಹೆಚ್ಐವಿ. ಏಡ್ಸ್ ಪೀಡಿತರು ಹೆಚ್ಚಾಗಿ ವಾಸಿಸುವಂತಹ ಹೈರಿಸ್ಕ್ ಪ್ರದೇಶಗಳಲ್ಲಿ ಗ್ರಾಮಸಭೆ, ವಿಚಾರಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ಆಶಾ ಅಂಗನವಾಡಿ ಕಾರ್ಯಕರ್ತೆಯರಿಂದ ಏರ್ಪಡಿಸುವ ಮೂಲಕ ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೆಚ್.ಐ.ವಿ. ಕಾರ್ಯಕ್ರಮಾಧಿಕಾರಿ ಡಾ. ಸನತ್ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ 2008ರಿಂದ ಪ್ರಸಕ್ತ ಮಾಹೆಯವರೆಗೆ ಒಟ್ಟು 4,832 ಶಂಕಿತ ಏಡ್ಸ್ ಪೀಡಿತರು ಎ.ಆರ್.ಟಿ. ಕೇಂದ್ರಗಳಲ್ಲಿ ನೋಂದಾವಣೆ ಮಾಡಿಸಿಕೊಂಡಿದ್ದು, ಈ ಪೈಕಿ 953 ಮಂದಿ ಸಾವನಪ್ಪಿದ್ದಾರೆ. 15 ಮಂದಿ ಚಿಕಿತ್ಸೆ ನಿಲ್ಲಿಸಿದ್ದಾರೆ. 164 ಮಂದಿ ಚಿಕಿತ್ಸೆಯನ್ನು ಪಡೆಯಲು ಬರುತ್ತಿಲ್ಲ, 377 ಮಂದಿಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದ್ದು, ಒಟ್ಟು ಜಿಲ್ಲೆಯಲ್ಲಿ 3,639 ಹೆಚ್.ಐ.ವಿ. ಬಾಧಿತರು ಎ.ಆರ್.ಟಿ. ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯ ಎ.ಆರ್.ಟಿ. ಕೇಂದ್ರಗಳಲ್ಲಿ ಮತ್ತು ತಾಲೂಕುಗಳಲ್ಲಿನ ಲಿಂಕ್ ಎ.ಆರ್.ಟಿ. ಕೇಂದ್ರಗಳಲ್ಲಿ ಹೆಚ್.ಐ.ವಿ. ರೋಗಿಗಳನ್ನು ತಪಾಸಣೆಗೊಳಪಡಿಸಲಾಗುತ್ತಿದ್ದು, ಸರ್ಕಾರದಿಂದ ಉಚಿತವಾಗಿ ನೀಡಲ್ಪಡುವ ಒಂದು ತಿಂಗಳಿಗಾಗುವಷ್ಟು ಮಾತ್ರೆಯನ್ನು ರೋಗಿಗಳಿಗೆ ನೀಡುವ ಮೂಲಕ ಸೂಕ್ತ ರೀತಿಯಲ್ಲಿ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಲೈಂಗಿಕ ವೃತ್ತಿ ತ್ಯಜಿಸಿ, ಇತರೆ ವಣತ್ತಿ ಬಯಸಿ ಬರುವಂತಹ ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ ವಸತಿ ಕಲ್ಪಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 40 ಸಾವಿರ ರು.ಗಳವರೆಗೆ ಸಾಲಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ಬಹುತೇಕ ಲೈಂಗಿಕ ಕಾರ್ಯಕರ್ತೆಯರಿಗೆ ಕಾಯಂ ವಿಳಾಸ ಇಲ್ಲದಿರುವ ಕಾರಣ ಸೌಲಭ್ಯ ದೊರಕುತ್ತಿಲ್ಲ. ಇಂತಹವರಿಗೆ ಕಾಯಂ ವಿಳಾಸ ಕಲ್ಪಿಸಲು ಯೋಚಿಸಲಾಗುತ್ತಿದೆ ಎಂದು ತಿಳಿಸಿದರು.
ಅಸುರಕ್ಷಿತ ಲೈಂಗಿಕ ಸಂಪರ್ಕ: ಹೆಚ್.ಐ.ವಿ. ಏಡ್ಸ್ ರೋಗವು ಶೇ.85 ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಶೇ.10 ರಷ್ಟು ರಕ್ತ ಪಡೆಯುವಿಕೆಯಿಂದ, ಶೇ.3 ರಷ್ಟು ಅಸುರಕ್ಷಿತ ಸಿರಂಜ್ಗಳನ್ನು ಬಳಸುವುದರಿಂದ ಹರಡುತ್ತದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 22 ಐ.ಸಿ.ಟಿ.ಸಿ. ಕೇಂದ್ರಗಳು ಹೆಚ್.ಐ.ವಿ. ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದು, ಏಡ್ಸ್ ದಿನಾಚರಣೆಯಂದು ಒಂದು ಕೇಂದ್ರವನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಐ.ಸಿ.ಟಿ.ಸಿ. ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಧ್ವನಿವರ್ಧಕ, ಕೇಬಲ್ ಟಿ.ವಿ.ಮೂಲಕ ಹೆಚ್.ಐ.ವಿ. ಏಡ್ಸ್ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮಗಳು ಆರಂಭವಾಗಲಿದ್ದು, ಕಾಲೇಜು ವಿದ್ಯಾರ್ಥಿಗಳ ಮೂಲಕ ಪ್ರಚಾರ ಕಾರ್ಯಕ್ರಮಗಳನ್ನೂ ಸಹ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಹೆಚ್.ಐ.ವಿ. ಏಡ್ಸ್ ಜಿಲ್ಲಾ ಸೂಪರ್ವೈಸರ್ ಮೋಹನ್ ಕುಮಾರಿ ಸೇರಿದಂತೆ ಇತರೆ ಎನ್.ಜಿ.ಓ. ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.