ದೇಗುಲ ನೂತನ ಕಟ್ಟಡ ಶೀಘ್ರ ನಿರ್ಮಾಣ ಮಾಡಲು ಆಗ್ರಹಿಸಿ ಪ್ರತಿಭಟನೆ
ತಿಪಟೂರು: ತುಮಕೂರು ಜಿಲ್ಲೆ ಕಲ್ಪತರು ನಾಡು ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ರಜತಾದ್ರಿಪುರ (ಹತ್ಯಾಳು ಬೆಟ್ಟ) ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ನೂತನ ಕಟ್ಟಡ ಕಟ್ಟುವ ಸಲುವಾಗಿ ಕಳೆದ 3 ವರ್ಷಗಳ ಹಿಂದೆ ಹಳೇಯ ದೇವಾಲಯವನ್ನು ಕೆಡವಿದ್ದು ನಿತ್ಯ ಪೂಜಾ ಕಾರ್ಯಕ್ರಮಕ್ಕೆ ಅಂದಿನಿಂದಲೂ ತೀವ್ರ ತೊಂದರೆಯಾಗಿದೆ ಎಂದು ಕೆಜೆಪಿ ಮುಖಂಡ ಲೋಕೇಶ್ವರ ಇಂದಿಲ್ಲಿ ಆರೋಪಿಸಿದರು. ಲೋಕೇಶ್ವರ ಹಾಗೂ ಈ ಭಾಗದ ಜಿ.ಪಂ. ಸದಸ್ಯ ಆನಂದರವಿ ನೇತೃತ್ವದಲ್ಲಿ ಬೆಟ್ಟದ ಬಳಿ ಜಿಲ್ಲಾಡಳಿತದ ವಿರುದ್ಧ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಭಕ್ತರು ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲು ಭಕ್ತರ ಮನಸ್ಸಿಗೆ ನೋವಾಗಿದೆ. ಕಳೆದ 3 ವರ್ಷಗಳಿಂದಲೂ ಸುತ್ತಮುತ್ತಲಿನ ಗ್ರಾಮದ,ರಾಜ್ಯದಾದ್ಯಂತ ಇರುವ ಭಕ್ತರು ಮುಜುರಾಯಿ ಇಲಾಖೆ ಸಂಪರ್ಕಿಸಿ ದೇವಸ್ಥಾನದ ತುರ್ತು ನಿರ್ಮಾಣಕ್ಕಾಗಿ ಒತ್ತಾಯಿಸಿದ್ದರೂ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮಕೈಗೊಂಡಿಲ್ಲ. ದೇವರಿಗೆ ಸರಿಯಾಗಿ ಪೂಜೆ ನಡೆಯುತ್ತಿಲ್ಲವಾದ ಕಾರಣ ಈ ಭಾಗದಲ್ಲಿ ಮಳೆ-ಬೆಳೆ ಆಗಿಲ್ಲದೆ ಬರದನಾಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.