ಮಗನ ಮನೆಗೆ ಹೊರಟ ಅಜ್ಜಿ...
ತುರುವೇಕೆರೆ: ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ. ಕಳೆದ ಐದಾರು ತಿಂಗಳ ಹಿಂದೆಯೂ ನೂರಾರು ಜನಕ್ಕೆ ನೀಡಿದ ಕೈ. ಇಂದು ಅವರಿವರು ಕೊಡುವ ತಿಂಡಿ ತಿನಿಸಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕು. ಅರಮನೆಯಂಥ ಮನೆಯಲ್ಲಿ ಇದ್ದವರು ಇಂದು ಶೌಚಾಲಯದಲ್ಲಿ ವಾಸ. ಕೇವಲ ಮೂರು, ಆರು ಅಡಿಯ ಜಾಗದಲ್ಲಿ ತನ್ನ ಕರುಳ ಬಳ್ಳಿಯೊಂದಿಗೆ ಬದುಕು ಸವೆಸಿದೆ. ಈಗ ಈ ಎಲ್ಲಾ ಸಂಕಷ್ಟಗಳಿಗೆ ಫುಲ್ ಸ್ಟಾಪ್. ಕಳೆದ ಎರಡು ತಿಂಗಳಿನಿಂದ ತನ್ನ ಮಗನ ಮನೆಯಿಂದ ತನ್ನ ಇನ್ನೊಬ್ಬ ಮಾನಸಿಕ ಅಸ್ವಸ್ಥನಾಗಿದ್ದ ಮಗನೊಂದಿಗೆ ಹೊರಗೆ ಬಂದಿದ್ದ ಅಜ್ಜಿ ಶನಿವಾರ ತನ್ನ ಹೆತ್ತ ಕರುಳನ್ನು ಸೇರುತ್ತಿದೆ.
ಇದು ತಾಲೂಕಿನ ಹುಲ್ಲೇಕೆರೆ ಗ್ರಾಮದಲ್ಲಿ ಕಳೆದ ಒಂದರೆಡು ತಿಂಗಳಿನಿಂದ ಬಸ್ ತಂಗುದಾಣದಲ್ಲಿ ವಾಸವಿದ್ದ ಸುಮಾರು 90 ವಯಸ್ಸಿನ ಚಿಕ್ಕಮ್ಮ ಮಗನ ಮಡಿಲು ಸೇರುತ್ತಿರುವ ಕಥೆ. ಅಜ್ಜಿ ಚಿಕ್ಕಮ್ಮಗೆ ಪ್ರತಿ ತಿಂಗಳು ಮಾಸಾಶನ ಬರುತ್ತಿದೆ. ಅದನ್ನು ತಾಲೂಕಿನ ಹುಲ್ಲೇಕೆರೆಯಲ್ಲೇ ಪಡೆಯುವುದು ವಾಡಿಕೆ. ಹಾಗಾಗಿ ಅಜ್ಜಿ ಪ್ರತಿ ತಿಂಗಳು ಹುಲ್ಲೇಕೆರೆಗೆ ಬಂದು ಹಣ ಪಡೆದು ಒಂದೆರಡು ದಿನ ಗ್ರಾಮದ ಪರಿಚಯಸ್ಥರ ಮನೆಯಲ್ಲಿ ಇದ್ದು ತುಮಕೂರಿನ ಮಗನ ಮನೆಗೆ ಹೋಗುತ್ತಿದ್ದರು. ಅದರಂತೆಯೇ ಕಳೆದ ಒಂದು ತಿಂಗಳ ಹಿಂದೆ ಹುಲ್ಲೇಕೆರೆ ಗ್ರಾಮಕ್ಕೆ ಬಂದು ಮಾಸಾಶನ ಪಡೆದು ಓಡಾಡಿಕೊಂಡಿದ್ದಾಗ ಯಾರೋ ಪಿಂಚಣಿ ಹಣ 500 ರು.ಗಳನ್ನು ಲಪಟಾಯಿಸಿದ್ದಾರೆ. ಬಸ್ ಚಾರ್ಜ್ ಅನ್ನು ಬೇರೆಯವರ ಬಳಿ ಕೇಳಲು ಮುಜುಗರ ಪಟ್ಟುಕೊಂಡಿದ್ದ ಅಜ್ಜಿ ಗ್ರಾಮದ ಬಸ್ ತಂಗುದಾಣದಲ್ಲೇ ಉಳಿದು ಕೊಂಡಿದ್ದರು. ಇತ್ತ ಮಕ್ಕಳೂ ಸಹ ತನ್ನ ತಾಯಿ ಎಂದಿನಂತೆ ಹತ್ತಾರು ದಿನಗಳ ನಂತರ ಬರಬಹುದು ಎಂದು ಕೊಂಡಿದ್ದರು. ಆದರೆ ಅಜ್ಜಿಯ ಪರಿಸ್ಥಿತಿಯೇ ಬೇರೆ ಆಗಿತ್ತು. ಅತ್ತ ಮಗನ ಮನೆಗೂ ಹೋಗಲಾರದೇ, ಇತ್ತ ಈ ಗ್ರಾಮದ ಪರಿಚಯಿಸ್ಥರ ಮನೆಗೂ ಹೋಗದೇ ಇದ್ದರು. ಬಸ್ ತಂಗುದಾಣದಲ್ಲಿ ಮಳೆ ಗಾಳಿಯಿಂದ ರಕ್ಷಣೆ ಪೆಡದುಕೊಳ್ಳುವ ಸಲುವಾಗಿ ಅಜ್ಜಿ ಶಾಲೆಯ ನೂತನ ಶೌಚಾಲಯದಲ್ಲಿ ಕಳೆದ ಐದಾರು ದಿನದಿಂದ ವಾಸವಾಗಿದ್ದರು. ಕನ್ನಡಪ್ರಭದಲ್ಲಿ ವರದಿ ಬಂದ ನಂತರ ಮಾನವ ಹಕ್ಕುಗಳ ಕಾರ್ಯಕರ್ತ ಸಿದ್ದಲಿಂಗೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಶನಿವಾರ ಅಜ್ಜಿಯನ್ನು ಪಾವಗಡದ ಅನಾಥಾಶ್ರಮಕ್ಕೆ ಸೇರಿಸುವ ಪ್ರಯತ್ನ ನಡೆಸಿದ್ದರು. ಶನಿವಾರ ಅಜ್ಜಿಯನ್ನು ಕರೆದುಕೊಂಡು ಹೋಗುವ ವೇಳೆಗೆ ತುಮಕೂರಿನಲ್ಲಿರುವ ಮಗನ ವಿಳಾಸ ಪತ್ತೆಯಾಯಿತು.
ಸಿಡಿಪಿಓ ರವೀಂದ್ರ ದೂರವಾಣಿ ಮೂಲಕ ಸೊಸೆಯೊಂದಿಗೆ ಮಾತನಾಡಿದರು. ತಾವೇನೂ ಅಜ್ಜಿಯನ್ನು ಕಳಿಸಿಲ್ಲ. ಅವರಾಗೇ ಪ್ರತಿ ತಿಂಗಳು ಹುಲ್ಲೇಕೆರೆ ಗ್ರಾಮಕ್ಕೆ ಹೋಗುತ್ತಾರೆ. ಹಲವು ದಿನಗಳ ನಂತರ ಮನೆಗೆ ಹಿಂತಿರುಗುತ್ತಾರೆ ಎಂದು ಸ್ಪಷ್ಟಪಡಿಸಿ ಅಜ್ಜಿ ಹಾಗೂ ಸೋದರನನ್ನು ತಮ್ಮ ಮನೆಗೆ ಕರೆದುಕೊಂಡು ಬರುವಂತೆ ಹೇಳಿದರು.
ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮುದ್ದಣ್ಣ, ಎಸಿಡಿಪಿಓ ಆಂಜನಪ್ಪ, ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಮೊದಲಾದರು ಅಜ್ಜಿ ಚಿಕ್ಕಮ್ಮ ಹಾಗೂ ಆಕೆಯ ಮಗ ಗಂಗಾಧರ್ನನ್ನು ಕಾರಿನಲ್ಲಿ ಕುಳ್ಳರಿಸಿಕೊಂಡು ಮಗ ರಂಗಸ್ವಾಮಿಯವರ ಮನೆಗೆ ಶನಿವಾರ ಸಾಯಂಕಾಲ ಸುಖವಾಗಿ ತಲುಪಿಸಿದರು.