ಶಿರಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಶಿರಾ: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಗೌರವ ಧನವನ್ನು ನೀಡಬೇಕೆಂದು ಹಾಗೂ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೇಡರೇಷನ್ ಶಿರಾದಲ್ಲಿ ಬೃಹತ್ ಜಾಥಾ ಮತ್ತು ಮುಷ್ಕರ ನಡೆಸಿತು. ಹಲವು ಬೇಡಿಕೆಗಳ ಈಡೇರಿಕೆಗಾಗಿ ನಗರದ ಪ್ರವಾಸಿ ಮಂದಿರದ ಸರ್ಕಲ್ನಲ್ಲಿ ಸೇರಿದ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಭೆ ಸೇರಿ ಪ್ರತಿಭಟಿಸಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಫೇಡರೇಷನ್ ಅಧ್ಯಕ್ಷೆ ಹೆಚ್.ಕೆ.ರಾಜಮ್ಮ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ರು.ವೇತನ ಕೊಡಬೇಕು ಎಂದರು.
ಚನ್ನಮಲ್ಲಪ್ಪಗೆ ಕೃಷಿ ಪ್ರಶಸ್ತಿ: ಅಭಿನಂದನೆ
ಪಾವಗಡ: ತುಮಕೂರು ಕನಕ ಜಯಂತ್ಯುತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತ ವತಿಯಿಂದ ಪಾವಗಡದ ಹಿರಿಯ ಮುಖಂಡ ಹಾಗೂ ಸಮಾಜ ಸೇವಕ ರೈತ ಚನ್ನಮಲ್ಲಪ್ಪ ಅವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯವೆಂದು ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ತಾ.ವೆಂಕಟಾಪುರ ನಾಗಭೂಷಣ್ ಅಭಿಪ್ರಾಯಪಟ್ಟರು. ಸುದ್ಧಿಗಾರರೊಂದಿಗೆ ಮಾತಾನಾಡಿದ ಅವರು ರೈತ ಕುಟುಂಬದ ಹಿನ್ನಲೆಯಿಂದ ಬಂದ ಚನ್ನಮಲ್ಲಯ್ಯ ಕಷ್ಟ ಜೀವಿ ಮತ್ತು ಉತ್ತಮ ರೈತ ಹಾಗೂ ರೈತರ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದು ಅಭಿವೃದ್ಧಿ ಹಿನ್ನಲೆಯಲ್ಲಿ ಬಹುತೇಕ ತಾ.ರೈತರಿಗೆ ಅರ್ಥಿಕ ಸಹಾಯ ಸೇರಿದಂತೆ ರೈತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಲಯನೆಸ್ ಸಂಸ್ಥೆಯಲ್ಲಿ ಕಾರ್ತೀಕ ದೀಪೋತ್ಸವ ಸ್ಪರ್ಧೆ
ದೇವನಹಳ್ಳಿ: ಇಲ್ಲಿನ ಲಯನೆಸ್ ಸಂಸ್ಥೆಯವರು ಕಾರ್ತೀಕ ದೀಪೋತ್ಸವ ಅಂಗವಾಗಿ ಮಹಿಳೆಯರಿಗಾಗಿ ಅಲಂಕಾರಿಕ ದೀಪೋತ್ಸವ ಸ್ಪರ್ಧೆಯನ್ನು ಶುಕ್ರವಾರ ಲಯನ್ ಸೇವಾ ಭವನದಲ್ಲಿ ಆಯೋಜಿಸಿದ್ದರು. ಈ ಸ್ಪರ್ಧೇಯಲ್ಲಿ 15 ಮಂದಿ ಮಹಿಳೆಯರು ಭಾಗವಹಿಸಿದ್ದು ವಿವಿಧ ರೂಪದ ರಂಗೋಲಿಯೊಂದಿಗೆ ಬಿಡಿಸಿದ ದೀಪಗಳನ್ನಿಟ್ಟು ಅಲಂಕರಿಸಿದ್ದರು. ಇದೇ ಸಂಧರ್ಭದಲ್ಲಿ ತೀರ್ಪುಗಾರರಾದ ಗಾಯಿತ್ರಿದೇವಿ ಮಾತನಾಡಿ ಲಯನೆಸ್ ಸಂಸ್ಥೆಯವರು ಇಂತಹ ಧಾರ್ಮಿಕ ಹಾಗೂ ಪಾರಂಪರಿಕ ಸ್ಪರ್ಧೆ ಆಯೋಜಿಸಿರುವುದು ಅಭಿನಂದನೀಯ ಅಲ್ಲದೆ ಯುವತಿಯರಿಗೆ ಪ್ರೋತ್ಸಾಹ ಮಾಡಿದಂತಾಗುತ್ತದೆ. ದೀಪೋತ್ಸವ ಸ್ಫರ್ಧೆಯಲ್ಲಿ ಅಲಂಕಾರಿಕವಾಗಿ ಜೋಡಿಸುವ ಧೂಪಗಳಿಗೆ ಮಹತ್ವವಿರುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸವಂತಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಾವತಮ್ಮ ವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಿಹಾರಿಕ (ಪ್ರ), ನಂದಿನಿ (ದ್ವಿ) ಹಾಗೂ ಮಂಜುಳ (ತೃ) ಬಹುಮಾನ ಪಡೆದರು. ನಿರ್ಮಲಕುಮಾರಿ ಸ್ವಾಗತ ಕೋರಿದರು, ಪುರಸಭಾ ಮಾಜಿ ಸದಸ್ಯೆ ಪದ್ಮಾವತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಲ್ಪನಾ ವಿಶ್ವನಾಥ್ ವಂದನೆ ಅರ್ಪಿಸಿದರು.
ಬಾಲಕನ ಚಿಕಿತ್ಸೆಗೆ ಸಹಾಯಹಸ್ತ
ವಿಜಯಪುರ: ಪಟ್ಟಣದ 9ನೇ ವಾರ್ಡಿನ ನಿವಾಸಿ ವರಲಕ್ಷ್ಮಮ್ಮನವರ ಮಗ ಸಾಯಿಚರಣ್(8) ಎಂಬ ಬಾಲಕನಿಗೆ ಬೆಳವಣಿಗೆ ಕುಂಠಿತವಾಗಿ ಕಿವಿ ಕೇಳದೆ ಮಾತು ಬಾರದಂತಾಗಿದ್ದು ಪೋಷಕರಿಗೆ ಚಿಕಿತ್ಸೆ ಕೊಡಿಸಲು ಕಷ್ಟಕರವಾಗಿದೆ. ಬಾಲಕ ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು ಹುಟ್ಟಿದಾಗಿನಿಂದಲೂ ಬೆಳವಣಿಗೆ ಅಷ್ಟಾಗಿದರೆ 5 ವರ್ಷದಲ್ಲಿ ಜ್ವರ ಪೀಡಿತನಾದ ನಂತರ ಮಾತು ಬಾರದೇ ಕಿವಿಯು ಕೇಳದಂತಾಗಿ ಸಂಪೂರ್ಣವಾಗಿ ಬೆಳವಣಿಗೆ ಕುಂಠಿತವಾಗಿದೆ ಎಂದು ತಾಯಿ ವರಲಕ್ಷ್ಮಮ್ಮ ಅಳಲು ತೋಡಿಕೊಂಡಿದ್ದಾರೆ. ಬಾಲಕನ ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು ಬರುವ ಹಣ ಹೊಟ್ಟೆಗಾದರೆ ಬಟ್ಟೆಗೆ ಸಾಲದಂತಾಗಿದೆ. ಇದರಲ್ಲಿ ಮಗನಿಗೆ ಈ ರೀತಿ ಆಗಿರುವುದು ಗಾಯದ ಮೇಲೆ ಬರೆಎಳೆದಂತಾಗಿದ್ದು ಚಿಕಿತ್ಸೆ ಕೊಡಿಸುವುದು ಸಾಕಷ್ಟು ದುಸ್ಸಾಹಸವಾಗಿದೆ ಎನ್ನುತ್ತಾರೆ. ದಯಮಾಡಿ ಸರ್ಕಾರದ ಪ್ರತಿನಿಧಿಗಳಾದ ಶಾಸಕರು ಅಥವಾ ಸಂಸದರ ನಿಧಿಯಿಂದಾಗಲಿ ಸಂಘ- ಸಂಸ್ಥೆಯವರಾಗಲಿ ಸಹಾಯಹಸ್ತ ನೀಡಿದರೆ ಚಿಕಿತ್ಸೆಗೆ ಅನುಕೂಲವಾಗುತ್ತದೆಂದು ವರಲಕ್ಷ್ಮಮ್ಮ ತಿಳಿಸಿದ್ದಾರೆ. ಸಹಾಯ ಹಸ್ತ ನೀಡುವವರು ಕೆನರಾ ಬ್ಯಾಂಕ್ ಎಸ್ಬಿ ಖಾತೆ-0438101026232, ಮೊ. 96864 74335.
ಅಪಘಾತ ವೇಳೆ ಗಲಭೆ ಅಮಾಯಕರ ಬಂಧನ: ಆರೋಪ
ರಾಮನಗರ: ನಗರದ ಎಪಿಎಂಸಿ ಬಳಿ ಗುರುವಾರ ಸಂಭವಿಸಿದ ಅಪಘಾತ ವೇಳೆ ಗಲಭೆ ಸಂಬಂಧ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ವಿಭೂತಿಕೆರೆ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಗ್ರಾಮದಿಂದ ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಈಗಾಗಲೇ ಬಂಧಿತ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪೈಶಾಚಿಕ ಕೃತ್ಯ: ಘಟನೆ ಸಂದರ್ಭದಲ್ಲಿ ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಲಾಠಿ ಪ್ರಹಾರ ನಡೆಸಿದ ಪೊಲೀಸರು ಲಾಠಿ ಪ್ರಹಾರ ನಡೆಸುವಾಗ ಸಾಕಷ್ಟು ಮಂದಿ ದಾರಿ ಹೋಕರು, ಕುತೂಹಲದಿಂದ ವೀಕ್ಷಿಸುತ್ತಿದ್ದವರ ಮೇಲೆ ಪೈಶಾಚಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿದರು.
ಸಾಮಾಜಿಕ ಹೋರಾಟಗಳಿಗೆ ಸಂಘಟನೆಗಳೇ ಸ್ಫೂರ್ತಿ
ತುಮಕೂರು: ನನ್ನ ಇದುವರೆಗಿನ ಸಾಮಾಜಿಕ ಹೋರಾಟಗಳಿಗೆ ಸಂಘಟನೆಗಳೇ ಸ್ಫೂರ್ತಿ ಎಂದು ಸಮಾಜ ಸೇವಕಿ, ವರದಕ್ಷಿಣೆ ವಿರೋಧಿ ವೇದಿಕೆ ಮಾಜಿ ಅಧ್ಯಕ್ಷೆ ಎಂ.ಬಿ. ಜೀವರತ್ನ ಅಭಿಪ್ರಾಯಪಟ್ಟರು. ಎಂ.ಬಿ. ಜೀವರತ್ನ ಸ್ನೇಹಬಳಗದಿಂದ ಜೀವರತ್ನ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ರವೀಂದ್ರ ಆರ್ಟ್ಸ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ತುಮಕೂರಿನಲ್ಲಿ ಅನೇಕ ಸಂಘ ಸಂಸ್ಥೆಗಳಲ್ಲಿ ಗುರ್ತಿಸಿಕೊಂಡು ಸಕ್ರಿಯವಾಗಿ ಕೆಲಸ ಮಾಡಲು ಅನೇಕ ವ್ಯಕ್ತಿಗಳ ಒಡನಾಟ ಹಾಗೂ ಪತಿಯ ಪ್ರೋತ್ಸಾಹದಿಂದ ಸಾಧ್ಯವಾಯಿತು. 1993- 94ರ ಸಮಯದಲ್ಲಿ ತುಮಕೂರಿನಲ್ಲಿ ಮಹಿಳೆಯೊಬ್ಬರ ಕೊಲೆಯಾದಾಗ ಅವರ ಪೋಷಕರು ವರದಕ್ಷಿಣೆ ವಿರೋಧಿ ವೇದಿಕೆಗೆ ಅಹವಾಲು ಸಲ್ಲಿಸಿ ನ್ಯಾಯಾ ದೊರಕಿಸಿ ಕೊಡಲು ಕೋರಿದ್ದರು.
ಯಾವುದೇ ಸೌಲಭ್ಯಗಳಿಲ್ಲದ ದಲಿತ ಕೇರಿ
ತುಮಕೂರು: ಜಿಲ್ಲಾ ಕೂಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯು ಗುಬ್ಬಿ ನಗರದ ಸುಭಾಷ್ ನಗರದ ಮಾರಿಹಳ್ಳ ಪೊಲೀಸ್ ಸ್ಟೇಷನ್ ಹಿಂಭಾಗದ ನಿವಾಸಿಗಳ ಕೊಂದು ಕೊರತೆಗಳ ಸಭೆಯಲ್ಲಿ ಅಲ್ಲಿನ ನಿವಾಸಿಗಳು ದಲಿತ ಕೇರಿಯಲ್ಲಿ ಯಾವೊಂದು ಸೌಲಭ್ಯಗಳು ಇಲ್ಲವೆಂದು ದೂರಿದರು. ಪರಿಶಿಷ್ಟ ಜಾತಿಗೆ ಸೇರಿದ ಜನ ಸಮುದಾಯವೇ ಹೆಚ್ಚಾಗಿದೆ. ಈ ಜನರಿಗೆ ಕುಡಿಯುವ ನೀರು ಶೌಚಾಲಯ, ವಿದ್ಯುತ್ ಮತ್ತು ಜೀವ ಭದ್ರತೆ ಮುಂತಾದವು ಈ ಜನರ ಪಾಲಿಗೆ ಇನ್ನು ಮರೀಚಿಕೆಯಾಗಿವೆ. ಜಿಲ್ಲಾಡಳಿತವಾಗಲಿ ಅಥಾವ ತಾಲೂಕಿನ ಸ್ಥಳೀಯ ಸಂಸ್ಥೆಗಳು ಆಗಲಿ ಇಲ್ಲಿನ ನಿವಾಸಿಗಳಿಗೆ ಯಾವುದೇ ತರಹದ ಸೌಲಭ್ಯಗಳನ್ನು ನೀಡದೆ, ಮೂಲಭೂತ ಹಕ್ಕುಗಳಿಂದ ವಂಚಿಸಿದ್ದಾರೆ ಎಂದು ದೂರಿದರು.
ಅಹೋರಾತ್ರಿ ಪ್ರತಿಭಟನೆ ಮುಕ್ತಾಯ
ರಾಮನಗರ: ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಮತ್ತು ಭೂ ರಹಿತರಿಗೆ ಭೂ ಮಂಜೂರಾತಿ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮೂರು ದಿನಗಳಿಂದ ಅಹೋರಾತ್ರಿ ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಮುಕ್ತಾಯಗೊಂಡಿತು. ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಬಿ.ಬಸವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ಜೈಲಿನಲ್ಲಿರಬೇಕಾದವರೇ ಇಂದು ಲೋಕಸಭೆ, ವಿಧಾನಸಭೆಯಲ್ಲಿ ಕುಳಿತು ನಮ್ಮನ್ನಾಳುತ್ತಿದ್ದಾರೆ. ಇಂತಹವರಿಂದ ದಲಿತರ, ಬಡವರ ಬದುಕು ಹಸನಾಗುವುದಿಲ್ಲ ಎಂದರು.
ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಎಸಿಗೆ ಮನವಿ
ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಗುರುಗದಹಳ್ಳಿ,ಮತ್ತಿಹಳ್ಳಿ, ಚಿಕ್ಕಬಿದರೆ ಗ್ರಾಮಗಳ ಕೆರೆಗಳಿಗೆ ಹೊನ್ನವಳ್ಳಿ ಏತನೀರಾವರಿ ಮೂಲಕ ನೀರು ಹರಿಸಲು ಒತ್ತಾಯಿಸಿ ಇಂದು ನಗರದ ಹಾಸನ ವೃತ್ತದಲ್ಲಿ ರಸ್ತೆ ತಡೆ ಕಾರ್ಯಕ್ರಮ ನಡೆಸಿದ ರೈತ ಮುಖಂಡರ ಉಪವಿಭಾಗಾಧಿಕಾರಿಗಳಾದ ಸಿಂಧು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಭಾನುಪ್ರಕಾಶ್, ಬಿಸಲೇಹಳ್ಳಿ ಜಗದೀಶ್, ಮತ್ತಿಹಳ್ಳಿ ಗಂಗಾಧರ್, ಹರಿಸಮುದ್ರ ಗಂಗಾಧರ್, ಕಾಂತರಾಜು, ಕೃಷ್ಣಮೂರ್ತಿ, ಗಂಗರಾಜು ಮತ್ತಿತರರಿದ್ದರು.
ಹೊಸಹುಡ್ಯ ಗ್ರಾಮದಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಪಂಚಾಯಿತಿ, ತಾಲೂಕು ಪಂಂಚಾಯಿತಿ ಹಾಗೂ ಕೃಷಿ ಇಲಾಖೆ ಮತ್ತು ಬೆಂಗಳೂರು ಜನೋದಯ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿ ತಾಲೂಕು ಹೊಸಹುಡ್ಯ ಗ್ರಾಮದಲ್ಲಿ ಭೂಚೇತನ ಮತ್ತು ಸಾವಯವ ಗ್ರಾಮ ಯೋಜನೆಯಡಿಯಲ್ಲಿ 2013-14ನೇ ಸಾಲಿನ ಹೋಬಳಿ ಮಟ್ಟದ ರಾಗಿ ಬೆಳೆ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆಯುವುದು ಮುಖ್ಯವಲ್ಲ ಕೃಷಿ ಇಲಾಖೆಯಲ್ಲಿ ನಿರಂತರವಾಗಿ ಬೆಳೆಗಳ ಬಗ್ಗೆ ಹೊಸ ಹೊಸ ಸಂಶೋಧನೆಗಳು, ಅವಿಷ್ಕಾರ ನಡೆಯುತ್ತಲೇ ಇರುತ್ತದೆ. ಅಲ್ಲದೆ ಆಧುನಿಕ ಸುಧಾರಿತ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ರೈತರಿಗೆ ಪರಿಚಯ ಮಾಡಿಸುತ್ತಲೇ ಇರುತ್ತದೆ ಆದ್ದರಿಂದ ರೈತರುಗಳು ಕೃಷಿ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.
2ನೇ ಅವಧಿಗೆ ಅಧ್ಯಕ್ಷರಾಗಿ ಕುದೂರು ರಾಜಣ್ಣ ಆಯ್ಕೆ
ಮಾಗಡಿ: ತಾಲೂಕು ಟಿಎಪಿಸಿಎಂಎಸ್ಗೆ 2ನೇ ಅವಧಿಗೆ ಅಧ್ಯಕ್ಷರಾಗಿ ಕುದೂರು ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕುದೂರು ರಾಜಣ್ಣ ಮಾತನಾಡಿ ಸ್ಥಳೀಯ ಸಂಘ, ಸಂಸ್ಥೆಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಂಘ, ಸಂಸ್ಥಗಳು ಉದ್ಧಾರವಾಗುತ್ತದೆ. ರೈತಾಪಿ ವರ್ಗಕ್ಕೂ ಶಕ್ತಿ ಮೀರಿ ಸೌಲತ್ತುಗಳನ್ನು ನೀಡಲು ಅನುಕೂಲಕರವಾಗುತ್ತದೆ. ನನ್ನನ್ನು 2ನೇ ಅವಧಿಗೂ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಸಂಸ್ಥೆಯ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರಲ್ಲದೆ ಸಮಾಜ ಸೇವಕ ಧೀಮಂತ ವ್ಯಕ್ತಿ ಸೋಲೂರು ಸಿದ್ದಪ್ಪ ಕಟ್ಟಿ ಬೆಳೆಸಿರುವ ಟಿಎಪಿಸಿಎಂಎಸ್ ಅನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿದರು. ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್ ಮಾತನಾಡಿದರು.
ಮುಖ್ಯಮಂತ್ರಿ ಅನುದಾನದಡಿ 10 ಕೋಟಿ ಮಂಜೂರು
ಮಾಗಡಿ: ತಾಲೂಕಿನ ಗ್ರಾಮ ಪಂಚಾಯ್ತಿಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಅನುದಾನದಡಿ 10 ಕೋಟಿ ಮಂಜೂರಾಗಿದೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ತಿಳಿಸಿದರು. ಅವರು ಮಾಗಡಿ ತಾಲೂಕಿನ ಕನ್ನಸಂದ್ರದಲ್ಲಿ ಸ್ನೇಹ ಸಮ್ಮಿಲನ ಯುವಕರ ಸಂಘ ಏರ್ಪಡಿಸಿದ್ದ 2ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕನ್ನಸಂದ್ರ ಗ್ರಾಮ ತೀರ ಹಿಂದುಳಿಯಲು ಈಗಿನ ಶಾಸಕರು ಕಾರಣರಾಗಿದ್ದಾರೆ. ಶಾಸಕರು ಕ್ಷೇತ್ರದ ಅಭಿವೃದ್ಧಿ ಮರೆತು, ಕೇವಲ ಲೋಕೋಪಯೋಗಿ ಹಗರಣಗಳ ಗುತ್ತಿಗೆದಾರರ ಪರ ನಿಂತರು. ಗ್ರಾಮೀಣ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸಲಿಲ್ಲ ಎಂದು ಲೇವಡಿ ಮಾಡಿದರು. ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಮಂಜುನಾಥ್ ಮಾತನಾಡಿದರು.
ಸಾವಿಗೀಡಾದ ರಾಸುಗಳಮಾಲೀಕರಿಗೆ ಚೆಕ್ ವಿತರಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕಿನಲ್ಲಿ ಕಾಲುಬಾಯಿ ಜ್ವರದಿಂದ ಸಾವಿಗೀಡಾದ 46 ರಾಸುಗಳ ಮಾಲೀಕರಿಗೆ 6.91 ಲಕ್ಷ ರು.ಗಳ ಪರಿಹಾರದ ಚೆಕ್ಕನ್ನು ಶಾಸಕ ಪಿಳ್ಳಮುನಿಶಾಮಪ್ಪ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿತರಣೆ ಮಾಡಿದರು. ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಯಾವುದೇ ರಾಸುಗಳಿಗೆ ರೋಗಗಳು ಬಾರದಂತೆ ಎಚ್ಚರಿಕೆ ವಹಿಸಬೇಕಾದ್ದು ಪಶುಪಾಲಕರ ಕರ್ತವ್ಯ. ಅಲ್ಲದೆ ಎಲ್ಲ ರಾಸುಗಳಿಗೆ ಅವುಗಳ ನಿಜವಾದ ಬೆಲೆಗ ವಿಮೆ ಮಾಡಿಸಿದ್ದೇ ಆದರೆ ಸರ್ಕಾರದ ಅಥವ ಒಕ್ಕೂಟದ ಪರಿಹಾರಕ್ಕಾಗಿ ಕಾಯಬೇಕಿಲ್ಲ. ಆದ್ದರಿಂದ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ವಿಮೆ ಮಾಡಿಸಿ ಎಂದು ತಿಳಿಸಿದರು. ರಾಸುಗಳ ಮಾಲೀಕರಿಗೆ ಪರಿಹಾರ ಧನವನ್ನು ರಾಜ್ಯ ಸರ್ಕಾರ ಮತ್ತು ಬೆಂಗಳೂರು ಹಾಲು ಒಕ್ಕೂಟ ಸೇರಿ ರೈತರಿಗೆ ಪರಿಹಾರ ಧನದ ಚೆಕ್ ವಿತರಣೆ ಮಾಡುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕರಾದ ಎ.ಸೋಮಣ್ಣ ತಿಳಿಸಿದರು.
ವಾಯುಮಾಲಿನ್ಯ ನಿಯಂತ್ರಣ: ವಿದ್ಯಾರ್ಥಿಗಳಿಂದ ಮೆರವಣಿಗೆ
ದೇವನಹಳ್ಳಿ: ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ 2013ರ ಅಂಗವಾಗಿ ಶಾಲಾ ಮಕ್ಕಳಿಂದ ಮೆರವಣೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಆಯೋಜಿಸಲಾಗಿತ್ತು.ಮೆರವಣೆಗೆಗೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎನ್.ಎಸ್.ಭೀಮಪ್ಪ ಹಾಗೂ ಬಿಇಒ ಮುನಿರಾಜು ಪಾರಿವಾಳ ಹಾರಿಬಿಡುವುದರ ಮೂಲಕ ಚಾಲನೆ ನೀಡಿದರಲ್ಲದೆ ವಾಹನಗಳ ಹೊಗೆಯಿಂದಾಗಿ ವಾಯುಮಾಲಿನ್ಯ ಉಂಟಾಗಿ ನಾಗರಿಕರ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ನಿಗದಿತ ಸಮಯಕ್ಕೆ ವಾಹನದ ಹೊಗೆ ಪ್ರಮಾಣದ ತಪಾಸಣೆ ಮಾಡಿಸಬೇಕು ಎಂದರು.
ಕನ್ನಡಿಗರ ಉಳಿವಿಗೆ ಮಹಿಷಿ ವರದಿ ಜಾರಿಯಾಗಲಿ: ಸ್ವಾಮಿ
ಆನೇಕಲ್ಲು: ಆಡಳಿತ ನಡೆಸುವ ಮಹನೀಯರು ಸರೋಜಿನಿ ಮಹಿಷಿ ವರದಿಯನ್ನು ಸಂರ್ಪೂಣವಾಗಿ ಓದಿ ಪ್ರಾಮಾಣಿಕವಾಗಿ ಅನುಷ್ಠಾನ ಮಾಡಿದಲ್ಲಿ ರಾಜ್ಯದಲ್ಲಿ ಕನ್ನಡಿಗನೇ ಸಾರ್ವಭೌಮ ಹಾಗೂ ಗಡಿ, ಜಲ ನೆಲ ಸಮಸ್ಯೆಗಳೂ ಬಹುತೇಕ ಪರಿಹಾರ ಕಾಣಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ. ಅವರು ಆನೇಕಲ್ಲಿನ ಶ್ರೀ ಭುವನೇಶ್ವರಿ ಕಾರು ಚಾಲಕರ ಕನ್ನಡ ಸಂಘ, ಟೆಂಪೋ ಚಾಲಕರು ಹಾಗೂ ಮಾಲಿಕರ ಸಂಘ, ಆಚೋ ಚಾಲಕರು ಹಾಗೂ ಬಸ್ ಮಾಲಿಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಅಂತಿಮ ವೈಕುಂಠ ಯಾತ್ರೆಯ ಉಚಿತ ಸೇವಾ ವಾಹನವನ್ನು ಲೋಕಾರ್ಪಣೆ ಮಾಡಿ ಮಾತನಾಡಿ ರಾಜ್ಯದ ವಿವಿಧ ಇಲಾಖೆಗಳು ಹಾಗೂ ಖಾಸಗಿ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿದಲ್ಲಿ ಭಾಷಾ ಬೆಳವಣಿಗೆ ಸಾಧ್ಯ ಎಂದರು.
ಗುಣಾತ್ಮಕ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಕಾಳಜಿ ವಹಿಸಲಿ
ಸೂಲಿಬೆಲೆ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರಕುತ್ತಿದ್ದು, ಪ್ರತಿಯೊಬ್ಬರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಹೇಳಿದ್ದಾರೆ. ಸೂಲಿಬೆಲೆ ಹೋಬಳಿ ಬೆಟ್ಟಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಮವಸ್ತ್ರ ಹಾಗೂ ಪ್ರಶಸ್ತಿ ಪತ್ರಗಳ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹೊಸಕೋಟೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್ ಮಾತನಾಡಿ, ಸರ್ಕಾರ ಕ್ಷೀರ ಭಾಗ್ಯದಂತ ಯೋಜನೆಗಳಿಂದ ಹಿಡಿದ ಮಕ್ಕಳ ಕಲಿಕೆಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ನೀಡಿ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಶಾಲೆಗಳನ್ನು ಮೆರಯುತ್ತಿದ್ದಾರೆ ಎಂದರು.
'ಅಕ್ಕ' ಕನ್ನಡ ಧಾರಾವಾಹಿಗೆ ಈಗ ಕೋರ್ಟಿನ ಕಡಿವಾಣ
ಇದೇ ಸೋಮವಾರ ಡಿಸೆಂಬರ್ ಎರಡರಿಂದ ರಾತ್ರಿ ಎಂಟೂವರೆಗೆ ಈಟೀವಿಯಲ್ಲಿ ಪ್ರಸಾರವಾಗಬೇಕಿದ್ದ ಅಕ್ಕ ಕನ್ನಡ ಧಾರಾವಾಹಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಲೇಖಕಿ ಹಾಗೂ ಕಿರುತೆರೆ ನಿರ್ಮಾಪಕಿ-ನಿರ್ದೇಶಕಿ ರೇಖಾರಾಣಿ ಅವರ ಕಣ್ಮಣಿ ಎಂಬ ಕತೆಯನ್ನು ಕದ್ದು ಅಕ್ಕ ಧಾರಾವಾಹಿ ನಿರ್ಮಿಸಲಾಗಿದೆ ಎಂದು ನೀಡಲಾಗಿದ್ದ ದೂರನ್ನು ಪರಿಶೀಲಿಸಿದ ಸಿವಿಲ್ಕೋರ್ಟ್ ನಂ.10ರ ನ್ಯಾಯಾಧೀಶರು ಶುಕ್ರವಾರ ಅಕ್ಕ ಧಾರಾವಾಹಿಗೆ ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆ ನಡೆದು ವಿವಾದ ಇತ್ಯರ್ಥ ಆಗುವವರೆಗೆ ಧಾರಾವಾಹಿಯು ಪ್ರಸಾರವಾಗುವಂತಿಲ್ಲ ಎಂದು ಕೋರ್ಟು ಆದೇಶ ನೀಡಿದೆ. ಇದು ತಮ್ಮದೇ ಕತೆಯ ಕೃತಿಚೌರ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿಕೆ ನೀಡಿರುವ ರೇಖಾ ರಾಣಿ ಇದಕ್ಕೆ ನೇರ ಕಾರಣ ಪ್ರಸ್ತುತ ಚಾನಲ್ನ ಧಾರಾವಾಹಿ ವಿಭಾಗದ ಮುಖ್ಯಸ್ಥರು ಎಂದು ಆರೋಪ ಹೊರಿಸಿದ್ದಾರೆ.
ಬ್ಯಾಂಕಾಕ್ನಲ್ಲಿ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ಬ್ಯಾನ್
ಪುನೀತ್ ರಾಜ್ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಶೂಟಿಂಗಿಗೆ ವಿಘ್ನ. ಆದರೆ ಹಾಗಂತ ಅದು ಶಾಶ್ವತ ವಿಘ್ನ ಅಲ್ಲ ಬಿಡಿ. ಅದೇನಿದ್ದರೂ ಕೇವಲ 'ಎಮರ್ಜೆನ್ಸಿ' ವಿಘ್ನ. ಬ್ಯಾಂಕಾಕ್ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ನಿನ್ನಿಂದಲೇ ಚಿತ್ರತಂಡ ಯೋಜನೆ ಮಾಡಿತ್ತು. ಅದರಂತೆ ಶೂಟಿಂಗ್ ಕೂಡ ಎರಡು ದಿನದ ಹಿಂದೆ ಶುರುವಾಗಿತ್ತು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬ್ಯಾಂಕಾಕ್ ನಗರದಲ್ಲಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಚಿತ್ರೀಕರಣಕ್ಕೆ ಯಾವ ತೊಂದರೆ ಇಲ್ಲದಿದ್ದರೂ ಸಾರ್ವಜನಿಕ ಸಭೆಗಳು, ಮೆರವಣಿಗೆಗಳ ಕಾರಣ ಚಿತ್ರೀಕರಣ ನಡೆಸುವುದು ಸುಲಭವಾಗಿರಲಿಲ್ಲ. ಈ ಕಾರಣಕ್ಕಾಗಿ ನಿನ್ನಿಂದಲೇ ಚಿತ್ರತಂಡ ಎರಡು ದಿನಗಳ ಕಾಲ ಶೂಟಿಂಗ್ ನಿಲ್ಲಿಸಬೇಕಾಗಿತ್ತು. ಅದರಂತೆ ಎರಡು ದಿನಗಳ ಬ್ರೇಕ್ನ ನಂತರ ಈಗ ಮತ್ತೆ ನಿನ್ನಿಂದಲೇ ಶುರುವಾಗಿದೆ.
ಅವರು ಹೇಳಿದ್ದು
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಬಿಎಸ್ವೈ ಶಕ್ತಿ ಬೇಕು. ಶೀಘ್ರವೇ ಕೇಂದ್ರದ ವರಿಷ್ಠರು ಅವರನ್ನು ಬಿಜೆಪಿ ಸೇರಿಸಿಕೊಳ್ಳುತ್ತಾರೆ. ಅವರು ಕೂಡ ಪಕ್ಷಕ್ಕೆ ಮರಳುವ ಸೂಚನೆ ನೀಡಿದ್ದಾರೆ.
ಟಿ ಕೆ.ಎಸ್. ಈಶ್ವರಪ್ಪಮಾಜಿ ಡಿಸಿಎಂ
ಒಳಮರ್ಮ
ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈ ಇಲ್ಲದೆ ನನಗೂ ಗೆಲ್ಲಲಾಗಿಲ್ಲ. ಲೋಕಸಭೆ ಚುನಾವಣೆಯಲ್ಲೂ ಅದೇ ಪರಿಸ್ಥಿತಿ ಮರುಕಳಿಸದಿರಲೆಂದು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದು ಹೇಳಿದಂತಿದೆ!
ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
@VishweshwarBhat
ನಮ್ಮ ಕಚೇರಿ ವಿಳಾಸ
ಕನ್ನಡಪ್ರಭ ಕಾರ್ಯಾಲಯ, ವೀರಶೈವ ಕೋ-ಆಪರೇಟಿವ್ ಬ್ಯಾಂಕ್ ಪಕ್ಕ, ಡಾ. ರಾಧಾಕೃಷ್ಣ ರಸ್ತೆ, ಸೋಮೇಶ್ವರ ಪುರಂ, ತುಮಕೂರು. ದೂ.: 0816-2252698.
ಓದುಗರಲ್ಲಿ ಮನವಿ
ಕನ್ನಡಪ್ರಭ ಪತ್ರಿಕೆ ನಿಮ್ಮ ಮನೆಗೆ ಸರಿಯಾಗಿ ವಿತರಣೆ ಆಗುತ್ತಿಲ್ಲವೆ?
ದೂ. 9535145940